
ಕಾರ್ಕಳ,ಡಿ.02: ಕಳೆದ ಎರಡು ದಶಕದಿಂದ ಡಾಮರೀಕರಣವಾಗದೇ ನೆನೆಗುದಿಗೆ ಬಿದ್ದಿದ್ದ ಕಾರ್ಕಳ ತಾಲೂಕಿನ ಅಜೆಕಾರು–ದೆಪ್ಪುತ್ತೆ–ಕಡ್ತಲ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ 2 ಕೋ.ರೂ ಅನುದಾನ ಬಿಡುಗಡೆಗೊಳಿಸಿದ್ದು, ಈ ಪರಿಸರದ ಜನರ ಮನವಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ತಿಳಿಸಿದರು.
ಅವರು ಸೋಮವಾರ ಅಜೆಕಾರಿನ ಚರ್ಚ್ ಗೇಟ್ ಬಳಿ ಗ್ರಾಮ ಸಮಿತಿ ವತಿಯಿಂದ ಅನುದಾನ ಮಂಜೂರುಗೊಳಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಶಿಫಾರಸ್ಸಿನ ಮೇರೆಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನವಿಯ ಮೇರೆಗೆ ಈ ರಸ್ತೆಗೆ ಅನುದಾನ ಮಂಜೂರಾಗಿದೆ ಎಂದು ಉದಯಕುಮಾರ್ ಶೆಟ್ಟಿ ಹೇಳಿದರು.
ಈ ಭಾಗದ ಜನರು ರಸ್ತೆ ಅಭಿವೃದ್ಧಿಗೆ ಶಾಸಕ ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಾರ್ಡಿನ 4 ಜನ ಪಂಚಾಯತ್ ಸದಸ್ಯರು ಕಾಂಗ್ರೆಸ್ ಪಕ್ಷದವರು ಎನ್ನುವ ಕಾರಣಕ್ಕಾಗಿ ರಸ್ತೆ ದುರಸ್ತಿ ಮಾಡಿಲ್ಲ.ನಾವು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಬಿಜೆಪಿಯವರು ರಾಜಕೀಯ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಲಿ ಎಂದರು.
ಆದಷ್ಟು ಬೇಗ ಈ ಕಾಮಗಾರಿಗೆ ಆರಂಭವಾಗಿ ಎರಡು ತಿಂಗಳಲ್ಲಿ ರಸ್ತೆ ಸಾರ್ವಜನಿಕರ ಒಡಾಟಕ್ಕೆ ಮುಕ್ತವಾಗಲಿ ಎಂದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಶೇ. 90% ಅನುಷ್ಟಾನಗೊಂಡಿದೆ ಎಂದು ಹೆಬ್ರಿ ಹೇಳಿದರು.
ಚರ್ಚ್ ಫಾದರ್ ಹೆನ್ರಿ ಮಸ್ಕರೆನ್ಸ್ ಮಾತನಾಡಿ, ಪಕ್ಷಭೇದ ಮರೆತು ಗ್ರಾಮದ ಅಭಿವೃದ್ದಿಗೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ಅನುದಾನ ಬಿಡುಗಡೆಗೊಳಿಸಿದ ಸಚಿವರಿಗೆ ಧನ್ಯವಾದ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ಡಾ. ಸಂತೋಷ್ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಗ್ರಾ.ಪಂ. ಸದಸ್ಯ ಅಬ್ದುಲ್ ಗಪೂರ್, ಜಾನ್ ಟೆಲ್ಲಿಸ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಯಶೋದಾ ಶೆಟ್ಟಿ, ಚರಿತ್ರಾ ಎಂ., ಅರುಣ್ ಡಿಸೋಜ, ಸ್ಟೀವನ್ ಲೊಬೊ ಮುಂತಾದವರು ಉಪಸ್ಥಿತರಿದ್ದರು.
ಸತೀಶ್ ಅಂಬೇಲ್ಕರ್ ಕಾರ್ಯಕ್ರಮ ನಿರೂಪಿಸಿದರು.

.
.
