Share this news

ಕಾರ್ಕಳ,ಡಿ.06: ತಾಲೂಕು ಇಪ್ಪತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಸಿದ್ಧಾಪುರ ವಾಸುದೇವ ಭಟ್ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ತಿಳಿಸಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಸಿದ್ದಾಪುರದ ಲಕ್ಷ್ಮಣ ಭಟ್ ಮತ್ತು ರಾಧಾಬಾಯಿ ದಂಪತಿ ಪುತ್ರರಾಗಿ ವಾಸುದೇವ ಭಟ್ ಅವರು 1960ರ ಅಕ್ಟೋಬರ್ 20ರಂದು ಜನಿಸಿದರು.
ವಾಸುದೇವ ಭಟ್ ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣ ಐದನೇ ತರಗತಿಯವರೆಗೆ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು ಮುಂದೆ ಸಂಸ್ಥಾನ ಕಾಶೀಮಠಾಧೀಶ ಶ್ರೀ ಸುಧೀಂದ್ರ ತೀರ್ಥರು ಸ್ಥಾಪಿಸಿದ
ಕುಂದಾಪುರ ತಾಲ್ಲೂಕಿನ ಬಸ್ರೂರು ಶ್ರೀ ಭುವನೇಂದ್ರ ಬಾಲಕಾಶ್ರಮದ ಆಶ್ರಯ ಪಡೆದರು. ಎಸ್‌ಎಸ್‌ಎಲ್‌ಸಿವರೆಗೆ ಶಾಲಾ ಶಿಕ್ಷಣದ ಜೊತೆಗೆ ಶಿಸ್ತುಬದ್ಧ ಜೀವನವನ್ನು, ಆಶ್ರಮದಲ್ಲಿದ್ದುಕೊಂಡು ಆರು ಮತ್ತು ಏಳನೇ ತರಗತಿಯನ್ನು ಬಸ್ರೂರು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಎಸ್ಎಸ್‌ಎಲ್‌ಸಿ ತನಕದ ಶಿಕ್ಷಣವನ್ನು ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿಯೂ ಕಲಿತರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಎಸ್ ಎಸ್ ಎಲ್ ಸಿ ನಂತರ ಅವರು ಆಶ್ರಮದಲ್ಲೇ ಇದ್ದು ಅಲ್ಲಿಯ ಸಮೀಕ್ಷಕರಿಗೆ ಸಹಾಯಕರಾಗಿ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಕಾಲೇಜಿನ ಮೂಲಕ ಜಿಲ್ಲಾ, ರಾಜ್ಯ ಮಟ್ಟದ ಭಾಷಣ, ಚರ್ಚಾ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿ ಕಾಲೇಜಿಗೆ ಖ್ಯಾತಿಯನ್ನು ತಂದುಕೊಟ್ಟರು.

ವಾಸುದೇವ ಭಟ್ಟರು ಬಿ.ಎ ಪದವಿಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಕಾಲೇಜಿನ ಕನ್ನಡ ಉಪನ್ಯಾಸಕ ಕನರಾಡಿ ವಾದಿರಾಜ ಭಟ್ಟರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಮಂಗಳೂರು ವಿಶ್ವವಿದ್ಯಾಲಯದ ಮಂಗಳ
ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿಗೆ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು.
ಕರ್ನಾಟಕ ಕರಾವಳಿಯ ಪ್ರಮುಖ ಆರಾಧನೆಯಾದ ನಾಗಾರಾಧನೆಯ ಕುರಿತು ವಿಶೇಷ ಅಧ್ಯಯನಗಳು ನಡೆದಿರದ ಸಂದರ್ಭದಲ್ಲಿ ವಾಸುದೇವ ಭಟ್ ಅವರು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ‘ನಾಗ ಜಾನಪದ-ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿಯನ್ನು, ನಂತರ ಮೈಸೂರು ವಿಶ್ವವಿದ್ಯಾಲಯದ ಮೂಲಕ ಡಿಪ್ಲೊಮಾ ಇನ್ ಜರ್ನಲಿಸಂ ನ್ನು ಅಧ್ಯಯನ ಮಾಡಿದರು.
1987ರಲ್ಲಿ ಕಾರ್ಕಳ ತಾಲ್ಲೂಕಿನ ನಿಟ್ಟೆ ಡಾ. ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇವರ ಸೇವೆಯನ್ನು ಅನುಲಕ್ಷಿಸಿ ಕಾಲೇಜಿನ ಆಡಳಿತ ಮಂಡಳಿ ಇವರಿಗೆ 2019ರಲ್ಲಿ ಪ್ರಾಂಶುಪಾಲರಾಗಿ ಬಡ್ತಿ ನೀಡಿತು. 2020ರ ಅಕ್ಟೋಬರ್ ತಿಂಗಳಿನಲ್ಲಿ ಇವರು ವೃತ್ತಿಯಿಂದ ನಿವೃತ್ತರಾದರು

ವಾಸುದೇವ ಭಟ್ಟ ಅವರ ಕನ್ನಡದ ಕೃತಿಗಳಾದ ‘ಪ್ರಬಂಧ ಕಲೆ’
(1991), ‘ಉಳ್ಳಾಲದ ರಾಣಿ ಅಬ್ಬಕ್ಕ’ ( ಮಕ್ಕಳ ಪುಸ್ತಕ ಬಹುಮಾನಿತ), ‘ಸರ್ಪರಾಜಾ ಮತ್ತು ಇತರ ಕತೆಗಳು’ (1996), ‘ನಮ್ಮೂರಿನ ಬಸ್ಸುಗಳು ಹಾಗೂ ಇತರ ಲಲಿತ ಪ್ರಬಂಧಗಳು'(2003), ‘ಕಾಂತಾಬಾರೆ ಬೂದಾಬಾರೆ ಮತ್ತು ಅಗೋಳಿ ಮಂಜಣ್ಣ(2006) – ಇದು ಮೂಲ್ಕಿ ಬಪ್ಪನಾಡು ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಪುರಸ್ಕೃತ ಕೃತಿ ಪ್ರಕಟವಾಗಿವೆ.
ಕೊಂಕಣಿ ಭಾಷೆಯಲ್ಲಿ ‘ಡಾ.ಟಿ.ಎಂ.ಎ. ಪೈ’, ‘ಪಂಜೆ ಮಂಗೇಶ್‌ರಾವ್’, ’20ವೆ ಶೆಕ್ಡ್ಯಾಚೆ ಮಾನ್ ಮನಿಸ್’ ಎಂಬ ಕೃತಿ ಸಂಪಾದನೆ ಪ್ರಕಟವಾಗಿವೆ.

ಅಪ್ರಕಟಿತ ಕೃತಿ ‘ನಾಗ ಜಾನಪದ’ ಎಂ.ಫಿಲ್ ಸಂಶೋಧನಾ ಪ್ರಬಂಧ.
ತಮ್ಮ ಕಾಲೇಜು ದಿನಗಳಲ್ಲಿ ‘ರೋಟರಿ ಯುವಜನ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲ್ಲೂಕು ಘಟಕದಿಂದ ‘ಸಾಧಕ ಪ್ರಶಸ್ತಿ 2023’ ಬಂದಿದೆ.
ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಅಲ್ಲಲ್ಲಿನ ಧಾರ್ಮಿಕ ಪ್ರವಚನಗಳಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಾಸುದೇವ ಭಟ್ಟರನ್ನು ಅನೇಕ ಸಂಘ ಸಂಸ್ಥೆಗಳು ಗೌರವ, ಸನ್ಮಾನಗಳನ್ನು ನೀಡಿ ಪುರಸ್ಕರಿಸಿವೆ.
2002ರಿಂದ ಇವರು ಪ್ರಜಾವಾಣಿ ಪತ್ರಿಕೆಗೆ ಕಾರ್ಕಳ ತಾಲೂಕಿನ ಅರೆಕಾಲಿಕ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಾಸುದೇವ ಭಟ್ಟ ಅವರದು ಸುಶಿಕ್ಷಿತ, ಸುಸಂಸ್ಕೃತ ಸಂಸಾರ. ಇವರಿಗೆ ಅನುರೂಪಳಾದ ಹಾಗೂ ಎಲ್ಲ ಕಾರ್ಯಚಟುವಟಿಕೆಗಳ ಹಿಂದಿನ ಶಕ್ತಿ ಪತ್ನಿ ವನಿತಾ. ತಮ್ಮ ಇಬ್ಬರು ಪುತ್ರಿಯರನ್ನು ಸಂಸ್ಕಾರವಂತರನ್ನಾಗಿ ಬೆಳೆಸುವ ಜವಾಬ್ದಾರಿ ಹೊತ್ತವರು. ಇವರ ಇಬ್ಬರು ಪುತ್ರಿಯರು ಎಂ.ಬಿ.ಎ ಪದವೀಧರರು. ಮೊದಲ ಪುತ್ರಿ ಸುಸ್ಥಿತಾ ಮದುವೆಯಾಗಿ ಪತಿಯ ಮನೆಯಲ್ಲಿ ಸುಖ ಸಂಸಾರ ನಡೆಸುತ್ತಿದ್ದಾರೆ. ಕಿರಿಯ ಪುತ್ರಿ ಹರ್ಷಿತಾ ಉತ್ತಮ ಉದ್ಯೋಗದಲ್ಲಿದ್ದಾರೆ.

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

 

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *