Share this news

ಉಡುಪಿ,ಡಿ.19: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಸ್ವಇಚ್ಛೆಯಿಂದ ಪುನರ್ವಸತಿಗೊಳ್ಳಲು ಒಪ್ಪಿರುವ ಕುಟುಂಬಗಳಿಗೆ ಪುನರ್ವಸತಿ ಪರಿಹಾರ ಪಾವತಿ ಮಾಡುವ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿ ಸಭೆಯು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಉದ್ಯಾನವನ ವ್ಯಾಪ್ತಿಯೊಳಗಿನ ಅರ್ಹ ಕುಟುಂಬಗಳ ಪಟ್ಟಿ, ಸಲ್ಲಿಸಲಾದ ದಾಖಲೆಗಳ ಪರಿಶೀಲನೆ ಹಾಗೂ ಪರಿಹಾರ ಮೊತ್ತ ಬಿಡುಗಡೆ ಪ್ರಕ್ರಿಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸ್ವಇಚ್ಛೆಯಿಂದ ಸ್ಥಳಾಂತರಗೊಳ್ಳುವ ಕುಟುಂಬಗಳಿಗೆ ಮಾತ್ರ ಸರ್ಕಾರದ ನಿಗದಿತ ಮಾರ್ಗಸೂಚಿಗಳಂತೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

ಪುನರ್ವಸತಿ ಪರಿಹಾರವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದರ ಜೊತೆಗೆ, ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ಡಿಎಫ್ ಓ ಶಿವರಾಮ ಬಾಬು ತಿಳಿಸಿದರು. ಮನೆ, ಜಮೀನು, ಕುಟುಂಬ ಸದಸ್ಯರ ಸಂಖ್ಯೆ ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ ಅರ್ಹತೆ ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಪುನರ್ವಸತಿ ಸ್ಥಳಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳ ಒದಗಿಕೆ, ಸ್ಥಳ ಪರಿಶೀಲನೆ ಹಾಗೂ ಬಾಕಿ ದಾಖಲೆಗಳ ಸಲ್ಲಿಕೆ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತು. ಯಾವುದೇ ಕುಟುಂಬವನ್ನು ಬಲವಂತದಿಂದ ತೆರವು ಮಾಡುವುದಿಲ್ಲ, ಬದಲಾಗಿ ಸ್ವಯಂ ಇಚ್ಛೆಯಿಂದ ಪುನರ್ವಸತಿಗೊಳ್ಳುವವರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ ಎಂದು ಶಿವರಾಮ ಬಾಬು ಸ್ಪಷ್ಟಪಡಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಒಟ್ಟು 243 ಕುಟುಂಬಗಳು ವಾಸವಿದ್ದು, ಈ ಪೈಕಿ ಪುನರ್ವಸತಿಗೆ 80 ಕುಟುಂಬಗಳಿಂದ ಅರ್ಜಿ ಸಲ್ಲಿಸಲಾಗಿದೆ.ಈ 80 ಅರ್ಜಿಯಲ್ಲಿ 62 ಅರ್ಜಿದಾರರಿಗೆ ಪರಿಹಾರ ನೀಡಿ ಇತ್ಯರ್ಥಗೊಳಿಸಲಾಗಿದೆ.ಉಳಿದ 18 ಅರ್ಜಿಗಳ ಪೈಕಿ ಕಾರ್ಕಳ ತಾಲೂಕಿನ ಅಂಡಾರು ಗ್ರಾಮದ ಒಂದು ಅರ್ಜಿಯನ್ನು ಸಭೆಯಲ್ಲಿ ಇತ್ಯರ್ಥಪಡಿಸಲಾಯಿತು.

ಮುಂದಿನ ದಿನಗಳಲ್ಲಿ ಸ್ಥಳ ಪರಿಶೀಲನೆ ಪೂರ್ಣಗೊಳಿಸಿ, ಪರಿಹಾರದ ಮೊದಲ ಹಂತದ ಪಾವತಿ ದಿನಾಂಕವನ್ನು ನಿಗದಿಪಡಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆಯೊಂದಿಗೆ ಮಾನವೀಯ ದೃಷ್ಟಿಕೋನದಲ್ಲಿ ಪುನರ್ವಸತಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಶಿವರಾಮ ಬಾಬು ತಿಳಿಸಿದರು.
ಈ ಸಂದರ್ಭದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ನಿಟ್ಟೆ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಸಮಿತಿಯ ಸದಸ್ಯರು, ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

 

 

    

   

             

     

             

           
   

 

 

   

             

     

             

       
   

  .      

   

             

     

             

           
   

 

 

   

             

     

             

       
   

                

   

             

     

             

           
   

 

 

   

             

     

             

       
   

 

Leave a Reply

Your email address will not be published. Required fields are marked *