
ಕಾರ್ಕಳ, ಡಿ.23: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂಡಾರು-ಕಾಡುಹೊಳೆ ಸಂಪರ್ಕ ರಸ್ತೆಯ ಮಂಗಳಾನಗರ ಅರಣ್ಯಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಹುಲಿಯೊಂದು ಓಡಾಟ ನಡೆಸುತ್ತಿರುವ ವಿಚಾರ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕಾಡುಹೊಳೆ-ಅಂಡಾರು ಮಾರ್ಗದ ಆರಣ್ಯಕ್ಕೆ ಹೊಂದಿಕೊAಡಿರುವ ಮಂಗಳಾನಗರ 5 ಸೆಂಟ್ಸ್ ಕಾಲೊನಿಯಲ್ಲಿನ ಜನರು ಈ ಭಾಗದಲ್ಲಿ ಸಂಚರಿಸಲು ಕೂಡ ಭಯಪಡುವಂತಾಗಿದೆ. ಕತ್ತಲಾಗುತ್ತಿದ್ದಂತೆಯೇ ಹುಲಿ ಈ ಭಾಗದಲ್ಲಿ ಓಡಾಟ ನಡೆಸಿ ಜೋರಾಗಿ ಗರ್ಜಿಸುವ ಕೂಗು ಕೇಳಿ ಜನರು ಭಯಭೀತರಾಗಿದ್ದಾರೆ. ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಮಂಗಳಾನಗರದಿಂದ ಕಲ್ಲೆಚ್ಚಿ ಹೋಗುವ ಮಾರ್ಗದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಬೈಕ್ ಸವಾರನಿಗೆ ಹುಲಿ ಕಾಣಿಸಿದೆ. ಇದಾದ ಬಳಿಕ ಸ್ಥಳೀಯ ಯುವಕರು ಟಾರ್ಚ್ ಲೈಟ್ ಬಳಸಿ ಪಟಾಕಿ ಸಿಡಿಸಿ ಹುಲಿಯನ್ನು ಓಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಹುಲಿ ಯಾವುದಕ್ಕೂ ಬೆದರದೇ ಗರ್ಜಿಸುತ್ತಾ ಅರಣ್ಯದಲ್ಲಿ ಸಂಚಾರ ನಡೆಸಿದೆ.
ಹುಲಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹ
ಕಳೆದ ಒಂದು ವಾರದಿಂದ ಹುಲಿಯ ಓಡಾಟ ತೀವೃಗೊಂಡ ಹಿನ್ನಲೆಯಲ್ಲಿ ಅಂಡಾರು-ಕಾಡುಹೊಳೆ-ಅಜೆಕಾರು ಭಾಗದ ಜನರು ರಾತ್ರಿವೇಳೆ ಮನೆಯಿಂದ ಹೊರಬರಲು ಭಯಪಡುವಂತಾಗಿದ್ದು, ತಮ್ಮ ಮನೆಯ ದನ,ನಾಯಿ ಮುಂತಾದ ಸಾಕುಪ್ರಾಣಿಗಳನ್ನು ರಕ್ಷಣೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ. ಇದಲ್ಲದೇ ಅರಣ್ಯದ ದಾರಿಯಲ್ಲಿ ಶಾಲೆ, ಕಾಲೇಜುಗಳಿಗೆ,ಕಚೇರಿಗಳಿಗೆ ಓಡಾಡುವವರಿಗೆ ಹುಲಿ ದಾಳಿ ನಡೆಸುವ ಭೀತಿ ಕಾಡುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಂತಾಭಿವೃದ್ಧಿಗೆ ಹುಲಿಗಳ ವಲಸೆ ಸಹಜ ಪ್ರಕ್ರಿಯೆಯಾಗಿದ್ದು, ಮನುಷ್ಯರಿಗೆ ಯಾವುದೇ ಅಪಾಯವಿಲ್ಲ: ಸತೀಶ್ , ಎಸಿಎಫ್, ವೈಲ್ಡ್ಲೈಫ್ ಕಾರ್ಕಳ ಉಪವಿಭಾಗ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ವ್ಯಾಪ್ತಿಯಲ್ಲಿ ಸುಮಾರು 4 ಹುಲಿಗಳಿದ್ದು, ಇವುಗಳು ಈ ಸಮಯದಲ್ಲಿ ಸಂತಾಭಿವೃದ್ದಿಗೆ ಗಂಡು ಹುಲಿಗಳು ಹೆಣ್ಣು ಹುಲಿಗಳನ್ನು ಹುಡುಕಿಕೊಂಡು ವಲಸೆ ಹೋಗುವುದು ಸರ್ವೇಸಾಮಾನ್ಯ, ಹಾಗಾಗಿ ಕುದುರೆಮುಖದ ಅರಣ್ಯದಿಂದ ಹುಲಿಯು ಪಶ್ಚಿಮ ಘಟ್ಟಗಳ ಮೂಲಕ ಅಂಡಾರು ಪ್ರದೇಶಕ್ಕೆ ವಲಸೆ ಬಂದಿರುವ ಸಾಧ್ಯತೆಯಿದೆ. ಮುಂದಿನ ಜನವರಿ ತಿಂಗಳಲ್ಲಿ ಹುಲಿಗಳ ಮೇಟಿಂಗ್ ಸೀಸನ್ ಮುಗಿಯಲಿದ್ದು, ನಂತರ ಹುಲಿಗಳು ತಮ್ಮ ಗಮ್ಯಸ್ಥಾನಕ್ಕೆ ಮರಳುತ್ತವೆ. ಸಾಮಾನ್ಯವಾಗಿ ಹುಲಿಗಳು ಮನುಷ್ಕರ ಮೇಲೆ ದಾಳಿ ಮಾಡುವ ಸಾಧ್ಯತೆ ಇಲ್ಲ, ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಇರುವಾಗ ಮಾತ್ರ ಅಪಾಯಕಾರಿಯಾಗುತ್ತವೆ. ಒಂಟಿ ಹುಲಿಗಳಿಂದ ಜನರಿಗೆ ಅಪಾಯ ಸಾಧ್ಯತೆ ಕಡಿಮೆ ಎಂದು ಎಸಿಎಫ್ ಸತೀಶ್,ಎನ್ ಸ್ಪಷ್ಟಪಡಿಸಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವ ಪ್ರಕ್ರಿಯೆಗೆ ಸಾಕಷ್ಟು ನಿರ್ಬಂಧಗಳಿವೆ.ಸರ್ಕಾರದ ಮಟ್ಟದಲ್ಲಿ ಈ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಇದಲ್ಲದೇ ಕುದುರೆಮುಖ ರಾಷ್ಟಿçÃಯ ಉದ್ಯಾನವನವು ಹುಲಿಗಳ ಆವಾಸಸ್ಥಾನವಾಗಿದ್ದು, ಇಲ್ಲಿಂದ ಹುಲಿಗಳನ್ನು ಸ್ಥಳಾಂತರಿಸಲು ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ರಾತ್ರಿವೇಳೆ ಹುಲಿ ಸಂಚಾರವಿರುವ ಕಾಡುದಾರಿಯಲ್ಲಿ ಜನರು ನಡೆದುಕೊಂಡು ಹೋಗುವುದು ಅಥವಾ ಬೈಕ್, ಸ್ಕೂಟರ್ ಗಳಲ್ಲಿ ಒಂಟಿಯಾಗಿ ಓಡಾಡದಂತೆ ವೈಲ್ಡ್ಲೈಫ್ ಕಾರ್ಕಳ ಉಪವಿಭಾಗದ ಎಸಿಎಫ್ ಸತೀಶ್, ಎನ್ ಹೇಳಿದ್ದಾರೆ.
ಒಟ್ಟಿನಲ್ಲಿ ಹುಲಿಯಿಂದಾಗಿ ಒಂದು ವಾರದಿಂದ ಅರಣ್ಯದ ಅಂಚಿನಲ್ಲಿರುವ ಮಂಗಳಾನಗರ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಹುಲಿಯಿಂದಾಗಿ ಮುಂಜಾನೆ ಕೃಷಿ ಚಟುವಟಿಕೆ, ರಬ್ಬರ್ ಟ್ಯಾಪಿಂಗ್, ಹೈನುಗಾರಿಕೆ ನಡೆಸುವ ರೈತರಿಗೆ ತೀವೃ ತೊಂದರೆಯಾಗಿದೆ.


.
.
