Share this news

 

ಕಾರ್ಕಳ, ಡಿ.27: ಇಂದಿನ ವಿಭಕ್ತ ಕುಟುಂಬದಲ್ಲಿ ತಂದೆ,ತಾಯಿ ಇಬ್ಬರೂ ಉದ್ಯೋಗದಲ್ಲಿ ಇರುವುದರಿಂದ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ತುಂಬಿಸುವ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ ಎಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಎಸ್.ಭಟ್ ಹೇಳಿದರು.

ಅವರು ಕಾರ್ಕಳ ತಾಲೂಕಿನ ಮಾಳ ಮಲ್ಲಾರಿನ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಗೋಕುಲಾಮೃತ’ ಸ್ಮರಣ ಸಂಚಿಕೆಯ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಹಳೆಯ ಶಾಲೆಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿರುವ ಸಂದರ್ಭದಲ್ಲಿ, 75 ವರ್ಷಗಳಿಂದ ಮಕ್ಕಳಿಗೆ ಸಂಸ್ಕಾರವನ್ನು ಧಾರೆ ಎರೆಯುತ್ತಿರುವ ಈ ಶಾಲೆ ಹಳ್ಳಿಯಲ್ಲಿ ಉತ್ಸವದಂತೆ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ದಾನಿಗಳು ದಾನಮಾಡುವ ಮೂಲಕ ಸಮಾಜದ ಋಣವನ್ನು ತೀರಿಸುವ ಪರಂಪರೆಯನ್ನು ಮುಂದುವರೆಸುತ್ತಿದ್ದು, ಮುಂದಿನ ಶತಮಾನೋತ್ಸವವೂ ವಿಜೃಂಭಣೆಯಿಂದ ನಡೆಯಲಿ ಎಂದು ಶುಭಾಶಯ ಕೋರಿದರು.
ಸೇವಾಕ್ಷೇತ್ರ ಸೇರಿದಂತೆ ಸಮಾಜದ ಎಲ್ಲಾ ರಂಗಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮಿನುಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಾತಾ–ಪಿತೃಗಳ ನಂತರ ಶಿಕ್ಷಕರೇ ಮಕ್ಕಳಿಗೆ ನಿಜವಾದ ಗುರುಗಳು. ಗುರುಗಳಿಂದ ದೊರೆಯುವ ಉತ್ತಮ ಶಿಕ್ಷಣವೇ ಮಕ್ಕಳಿಗೆ ಭದ್ರವಾದ ನೆಲೆಯನ್ನು ನಿರ್ಮಿಸುತ್ತದೆ. ಅದೇ ಶಿಕ್ಷಣ ಮಕ್ಕಳನ್ನು ಉತ್ತಮ ವ್ಯಕ್ತಿಗಳಾಗಿ, ಸಮಾಜಕ್ಕೆ ಮಾದರಿಯಾಗುವ ನಾಗರಿಕರಾಗಿ ರೂಪಿಸುತ್ತದೆ ಎಂದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪಾಠಪ್ರವಚನಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಶಿಸ್ತು ಹಾಗೂ ಸಮಯಪಾಲನೆಯ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಎಂ. ಪ್ರಭಾಕರ ಜೋಶಿ ವಹಿಸಿದ್ದರು. ನಾಸಿಕ್‌ನ ಉದ್ಯಮಿ ಶ್ರೀ ಸತೀಶ ಚಿಪ್ಳೂಣ್‌ಕರ್ ಮಾತನಾಡಿದರು.
ಸ್ಮರಣ ಸಂಚಿಕೆಯ ಸಂಪಾದಕರಾದ ಅರವಿಂದ ಚಿಪ್ಳೂಣ್‌ಕರ್ ಮಾತನಾಡಿ, ಅಮೃತ ಮಹೋತ್ಸವವು ಹಳೆಯ ನೆನಪುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯವಾಗಿದ್ದು, ನೆನಪುಗಳ ಗುಚ್ಚವನ್ನು ಹಂಚಿಕೊಳ್ಳುವ ಜೊತೆಗೆ ಭವಿಷ್ಯದ ಕಾಲಘಟ್ಟವನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿದೆ ಎಂದರು. ಪ್ರವಾಸದ ಛಾಯಾಚಿತ್ರಗಳು, ಸ್ವಾರಸ್ಯಕರ ಚಿತ್ರಣಗಳು ಹಾಗೂ ನೆನಪುಗಳ ಬುತ್ತಿಯಂತಿರುವ ವಿಶೇಷ ಲೇಖನಗಳನ್ನು ಸಂಚಿಕೆಯಲ್ಲಿ ಒಳಗೊಂಡಿದ್ದು, ಇದು ಪರಿಪೂರ್ಣ ಸ್ಮರಣ ಸಂಚಿಕೆಯಾಗಿರುವುದಾಗಿ ಹೇಳಿದರು. ಅವರು ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿ ಅದರ ಮಹತ್ವವನ್ನು ವಿವರಿಸಿದರು.


ಗುರುಕುಲ ಶಾಲೆಯ ನಿವೃತ್ತ ಶಿಕ್ಷಕ ಶ್ರೀರಾಮ ಭಟ್ ಹಾಗೂ ಕರ್ನಾಟಕ ಬ್ಯಾಂಕ್‌ನ ಸುಮನ ಘಾಟೆ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಮಂಗಳೂರು ಎಂ.ಡಿ. ಮತ್ತು ಸಿ.ಇ.ಒ. ಶ್ರೀ ರಾಘವೇಂದ್ರ ಎಸ್. ಭಟ್, ರಾಮ ಭಟ್ ಪೊಳಲಿ, ಅರವಿಂದ ಚಿಪ್ಳೂಣ್ಕರ್ ಸೇರಿದಂತೆ ಹಲವಾರು ದಾನಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಸತೀಶ ಚಿಪ್ಳೂಣ್ಕರ್, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ನಾಗಭೂಷಣ ಜೋಶಿ, ಸ್ಮರಣ ಸಂಚಿಕೆಯ ಸಂಪಾದಕ ಅರವಿಂದ ಚಿಪ್ಳೂಣ್ಕರ್, ಕಾರ್ಕಳ ಗೋಪಾಲ ಕೃಷ್ಣ ಗೋರೆ , ಮಾಳ ಅನಂದ‌ನಿಲಯದ ದಿನೇಶ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ರಾಮ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಗಜಾನನ ಮರಾಠೆ ಸ್ವಾಗತಿಸಿ,ರಾಮ ಶೇರಿಗಾರ್ ಧನ್ಯವಾದ ಸಲ್ಲಿಸಿದರು.
ವಸಂತ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *