
ಕಾರ್ಕಳ,ಜ.08: ಕಾರ್ಕಳವನ್ನು ಪ್ರೀತಿಸುವವನು ಕಾರ್ಕಳದ ಪ್ರವಾಸೋದ್ಯಮವನ್ನು ಬೆಳೆಸುತ್ತಾನೆಯೇ ಹೊರತು ತನ್ನ ರಾಜಕೀಯದ ಚಟಕ್ಕಾಗಿ ಪ್ರವಾಸೋದ್ಯಮವನ್ನು ಮೊಟಕುಗೊಳಿಸಲಾರ,ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ದುಸ್ಥಿತಿಗೆ ಮುನಿಯಾಲು ಉದಯ ಶೆಟ್ಟಿ ಕುಕೃತ್ಯವೇ ಕಾರಣ ಎಂದು ಕಾರ್ಕಳ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಆರೋಪಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರವಾಸೋದ್ಯಮಕ್ಕೆ ಕಿರೀಟ ಪ್ರಾಯವಾಗಬೇಕಾಗಿದ್ದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಪರಶುರಾಮ ಥೀಮ್ ಪಾರ್ಕ್,ಕಾರ್ಕಳ ನಕಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಉದಯ ಶೆಟ್ಟಿಯವರು ಅಡ್ಡಗಾಲು ಹಾಕಿದ ಪರಿಣಾಮ ಇವತ್ತಿಗೆ ನಿರ್ಜನ ಪ್ರದೇಶವಾಗಿ ಬದಲಾಗಿದ್ದು ಕಳ್ಳಕಾಕರ ಅನೈತಿಕ ಚಟುವಟಿಕೆಗಳ ತಾಣವಾಗುವ ಭೀತಿ ಸೃಷ್ಟಿಯಾಗಿದೆ.
ಉದಯ ಶೆಟ್ಟಿಯವರೇ ಒಂದು ಯೋಜನೆಯನ್ನು ಹಳ್ಳ ಹಿಡಿಸುವುದು ಸಾಧನೆಯಲ್ಲ. ಹಾಗೂ ಇದು ರಾಜಕಾರಣಿಗೆ ಶೋಭೆ ತರುವುದಿಲ್ಲ. ಕಾರ್ಕಳಕ್ಕೆ ಹೊಸ ಯೋಜನೆಯನ್ನು ತಂದು ಪ್ರವಾಸೋದ್ಯಮವನ್ನು ಬೆಳೆಸಿ ಕಾರ್ಕಳದ ಹೆಸರನ್ನು ಬೆಳಗಿಸುತ್ತಿದ್ದರೆ ಅದೊಂದು ಸಾಧನೆ.ಉದಯ ಶೆಟ್ಟಿಯವರು ಇಂತಹ ಮತ್ತೊಂದು ಯೋಜನೆಯನ್ನು ಕಾರ್ಕಳಕ್ಕೆ ತಂದು ಪರಶುರಾಮ ಥೀಮ್ ಪಾರ್ಕಿಗಿಂತಲೂ ಮಿಗಿಲಾದ ಅದ್ದೂರಿ ಕಾರ್ಯಕ್ರಮವನ್ನು ಯೋಜನೆಯ ಮೂಲಕ ಪರಿಚಯಿಸಬಹುದಿತ್ತು ಆದರೆ ಇದೆಲ್ಲವನ್ನೂ ಬಿಟ್ಟು ಕಾರ್ಕಳದ ಜನರಿಗೆ ಅನುಕೂಲಕರವಾಗಬೇಕಾಗಿದ್ದ ಯೋಜನೆಯನ್ನು ಕಾರ್ಕಳದ ಕೀರ್ತಿಯನ್ನು ಎತ್ತಿ ಹಿಡಿಯುವಂತಹ ಕ್ಷೇತ್ರವನ್ನು ಬರಡು ಭೂಮಿಯ ರೀತಿ ಷಡ್ಯಂತ್ರದ ಮೂಲಕ ಪರಿವರ್ತಿಸಿ ಈಗ ತಮ್ಮ ತಪ್ಪು ಅರಿವಾದಾಗ ರಾಜಕೀಯದ ಸಭ್ಯತೆ ಮೀರಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದು ವಿಪರ್ಯಾಸ.
ಮುನಿಯಾಲು ಉದಯ ಶೆಟ್ಟಿಯವರೇ ನಿಮ್ಮ ರಾಜಕೀಯ ಹಪಾಹಪಿಗೆ ಕಾರ್ಕಳದ ಅಭಿವೃದ್ಧಿಗೆ ಕಲ್ಲು ಹಾಕಬೇಡಿ. ಸಾಧ್ಯವಾದರೇ ಜನರಿಗೆ ಉಪಯೋಗವಾಗುವ ಕೆಲಸ ಮಾಡಿ ಆಗದಿದ್ದರೆ ಆ ಕೆಲಸ ಮಾಡುವವರಿಗೆ ಅಡ್ಡಕಾಲು ಹಾಕಬೇಡಿ ಎಂದು ರಾಕೇಶ್ ಶೆಟ್ಟಿ ಕಿವಿಮಾತು ಹೇಳಿದ್ದಾರೆ

.
.
