
ಕಾರ್ಕಳ, ಜ.18:ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಮಗಳು ತನ್ನ ಕಣ್ಣೆದುರೇ ಮೃತಪಟ್ಟ ಘಟನೆಯಿಂದ ಮನನೊಂದ ತಾಯಿಯೂ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮರ್ಣೆ ಗ್ರಾಮದ ಅಜೆಕಾರು ಕೈಕಂಬ ಬಸದಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಕೈಕಂಬದ ದಲಿತ ಸಮುದಾಯದ ಮಹಿಳೆ ಕುರುಂಬಿಲು (63) ಹಾಗೂ ಅವರ ಮಗಳು ವಸಂತಿ (30) ಎಂಬವರು ಮೃತಪಟ್ಟ ದುರ್ದೈವಿಗಳು.
ತಾಯಿ ಹಾಗೂ ಮಗಳು ಮರ್ಣೆ ಗ್ರಾಮದ ಕೈಕಂಬ ಬಸದಿ ಎಂಬಲ್ಲಿ ಐದು ಸೆಂಟ್ಸ್ ಕಾಲೋನಿಯಲ್ಲಿ ವಾಸವಾಗಿದ್ದರು. ವಸಂತಿ ಅವರು ಕಳೆದ ಸುಮಾರು ಆರು ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಮಂಗಳೂರು ವೆನ್ಲಾಕ್ ಆಸ್ಪತ್ರೆ ಹಾಗೂ ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ವಸಂತಿಯವರ ಆರೋಗ್ಯ ಹದಗೆಟ್ಟು ಕಳೆದ ಒಂದು ವಾರದಿಂದ ಹಾಸಿಗೆಯಲ್ಲೇ ಇದ್ದರು.
ಶನಿವಾರ ಕುರುಂಬಿಲು ಅವರು ಎಂದಿನಂತೆ ಕೆಲಸಕ್ಕೆ ತೆರಳಿ ಸಂಜೆ ಮನೆಗೆ ಮರಳಿದ್ದರು. ರವಿವಾರ ಬೆಳಿಗ್ಗೆ 8 ಗಂಟೆಯಾದರೂ ಕುರುಂಬಿಲ ಮನೆಯವರು ಹೊರಬರದ ಹಿನ್ನೆಲೆಯಲ್ಲಿ ನೆರೆಮನೆಯ ನಿವಾಸಿ ರೆಹಮತುಲ್ಲ ಅವರು ಕುರುಂಬಿಲ ಅವರ ಮುಂಭಾಗದ ಬಾಗಿಲು ತೆರೆದಿದ್ದರೂ ಒಳಗೆ ಯಾರೂ ಕಾಣಿಸದ ಹಿನ್ನೆಲೆಯಲ್ಲಿ ಅವರ ಕುರುಂಬಿಲು ಅವರ ಅಕ್ಕ ಶಾರದಾ ಅವರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ಶಾರದ ಹಾಗೂ ರೆಹಮತುಲ್ಲಾ ಮನೆ ಒಳಗೆ ತೆರಳಿ ಪರಿಶೀಲಿಸಿದಾಗ, ಕುರುಂಬಿಲು ಅವರು ಮನೆಯ ಹಾಲ್ ಪಕ್ಕದ ಕೊಠಡಿಯಲ್ಲಿ ನೈಲಾನ್ ಹಗ್ಗದಿಂದ ನೇಣಿಗೆ ಶರಣಾಗಿದ್ದರು. ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ವಸಂತಿ ಕೂಡ ಮೃತಪಟ್ಟಿದ್ದರು.
ವಸಂತಿ ಅವರು ಕ್ಯಾನ್ಸರ್ ರೋಗ ಉಲ್ಬಣದಿಂದ ಮೃತಪಟ್ಟ ಹಿನ್ನೆಲೆಯಲ್ಲಿ, ಮಗಳ ಸಾವಿನಿಂದ ಆಘಾತಗೊಂಡು ಕುರುಂಬಿಲು ಕೂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

.
.
.
.
