
ಕಾರ್ಕಳ,ಜ.23: ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಕಂಬಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಖಾಸಗಿ ಬಸ್ ಹಾಗೂ ತೂಫಾನ್ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಲಬುರಗಿ ಜಿಲ್ಲೆಯ ಖಾನಾಪೂರದ ಮೂವರು ಮೃತಪಟ್ಟಿದ್ದು, 9 ಜನ ಗಾಯಗೊಂಡಿದ್ದಾರೆ.ಮೃತಪಟ್ಟವರನ್ನು ಚಾಲಕ ಮಣ್ಣಪ್ಪ, ಚೇತನ್(27) ಹಾಗೂ ರೋಹಿತ್(28) ಎಂದು ಗುರುತಿಸಲಾಗಿದೆ.
ಅಪಘಾತಕ್ಕೀಡಾದ ತೂಫಾನ್ ವಾಹನದಲ್ಲಿ ಕಲಬುರಗಿ ಜಿಲ್ಲೆಯ ಖಾನಾಪುರ ಬಂದೆ ನಿವಾಸಿಗಳು ಬುಧವಾರ ಪ್ರವಾಸಕ್ಕೆಂದು ತೂಫಾನ್ ವಾಹನದಲ್ಲಿ ಹೊರಟಿದ್ದ ಈ ತಂಡ ಮೊದಲು ಮುರುಡೇಶ್ವರ ದೇವಾಲಯ, ಬಳಿಕ ಮರವಂತೆ ಕಡಲತೀರ ಹಾಗೂ ಉಡುಪಿ ಕೃಷ್ಣ ದರ್ಶನ ಮುಗಿಸಿಕೊಂಡು ಧರ್ಮಸ್ಥಳದತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ತೂಫಾನ್ ವಾಹನ ಬಹುತೇಕ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತಪಟ್ಟವರು ಸೇರಿ ಒಟ್ಟು 13 ಮಂದಿ ಗಾಯಗೊಂಡಿದ್ದಾರೆ.
ಮಲ್ಲಮ್ಮ (45), ಸಂಗೀತ (40), ಕವಿತಾ (38) ಬಸವರಾಜ್ (56), ಕಿಶೋರ್ (28), ಲಕ್ಷ್ಮೀ (25), ಜ್ಯೋತಿ (25), ಜಯಲಕ್ಷ್ಮೀ (24), ರೋಹಿತ್ (28), ಚೇತನ್ (27), ಕುಶಲ್ (2) ಗಾಯಗೊಂಡವರನ್ನು ತಕ್ಷಣ ಕಾರ್ಕಳ ಹಾಗೂ ಉಡುಪಿ ನಗರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತದ ಸ್ಥಳಕ್ಕೆ ಕಾರ್ಕಳ ನಗರ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಬೆಳ್ತಂಗಡಿ ಮೂಲದ ವರುಣ್ ಟ್ರಾವೆಲ್ಸ್ ಎಂಬ ಹೆಸರಿನ ಖಾಸಗಿ ಬಸ್ ಅತಿವೇಗದಲ್ಲಿ ರಸ್ತೆಯ ಬಲಭಾಗದಲ್ಲಿ ಚಲಾಯಿಸಿದ ಪರಿಣಾಮ ಧರ್ಮಸ್ಥಳಕ್ಕೆ ಹೋಗುತ್ತಿದ್ದ ತೂಫಾನ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 169ಎ ಯ ಅವೈಜ್ಞಾನಿಕ ಕಾಮಗಾರಿಯೇ ಇಂತಹ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೆದ್ದಾರಿಯಲ್ಲಿ ಸೂಕ್ತ ದಿಕ್ಕು ಸೂಚಕ ಫಲಕಗಳ ಕೊರತೆ, ಸರಿಯಾದ ಡಿವೈಡರ್‌ಗಳಿಲ್ಲದಿರುವುದು ಹಾಗೂ ಏಕಮುಖ ಸಂಚಾರ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆಯುತ್ತಿದ್ದರೂ ವಾಹನ ಸಂಚಾರಕ್ಕೆ ಸ್ಪಷ್ಟ ನಿಯಮಗಳಿಲ್ಲದೆ, ಎರಡು ಬದಿಗಳಿಂದ ವಾಹನಗಳು ಮುಖಾಮುಖಿಯಾಗಿ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತಕ್ಷಣ ಸರಿಪಡಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಒತ್ತಾಯಿಸಿದ್ದಾರೆ.

.
.
.
.
