
ಕಾರ್ಕಳ, ಜ.25: ಅತ್ತೂರು-ಕಾರ್ಕಳದ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಶನಿವಾರ ಭಾತೃತ್ವದ ದಿನವನ್ನು ಭಕ್ತಿಪೂರ್ಣವಾಗಿ ಆಚರಿಸಲಾಯಿತು.
ಈ ದಿವ್ಯ ಬಲಿಪೂಜೆಯನ್ನು ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಬಿಜೈ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಧರ್ಮಗುರುಗಳು ಪ್ರಧಾನ ಧರ್ಮಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ದಿವ್ಯ ಪರಮ ಪ್ರಸಾದ ಕ್ರೈಸ್ತ ಜೀವನದ ಮೂಲ ಮತ್ತು ಶಿಖರವಾಗಿದ್ದು, ಅದರ ಮೂಲಕ ಏಕತೆ, ಸೇವೆ ಮತ್ತು ಸಾರ್ವತ್ರಿಕ ಸಹೋದರತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿಶ್ವಾಸಿಗಳಿಗೆ ಕರೆ ನೀಡಿದರು.
ಪವಿತ್ರ ಬಲಿಪೂಜೆಯಲ್ಲಿ ಆಲ್ಬನ್ ಡಿಸೋಜ, ಸಂತ ಲಾರೆನ್ಸ್ ಬಸಿಲಿಕಾದ ಧರ್ಮಗುರು; ವಂ.ಸ್ವಾಮಿ, ರಾಬಿನ್ ಸಂತುಮಾಯರ್, ಸಹಾಯಕ ಧರ್ಮಗುರು; ವಂ.ಸ್ವಾಮಿ. ರೋಮನ್, ಆಧ್ಯಾತ್ಮಿಕ ನಿರ್ದೇಶಕರು; ಹಾಗೂ ಇತರ ಧರ್ಮಗುರುಗಳು ಭಾಗವಹಿಸಿದ್ದರು.
ಪವಿತ್ರ ಬಲಿಪೂಜೆಯ ನಂತರ ಭಕ್ತಿಭರಿತ ದಿವ್ಯ ಪರಮ ಪ್ರಸಾದದ ಮೆರವಣಿಗೆ ನಡೆಯಿತು. ಪವಿತ್ರ ಸಂಸ್ಕಾರವನ್ನು ದೇವಾಲಯದ ಆವರಣದಿಂದ ದೂಪದಕಟ್ಟೆ ವೃತ್ತದವರೆಗೆ ಮೆರವಣಿಗೆಯಲ್ಲಿ ಹೊತ್ತುಕೊಂಡು ಹೋಗಲಾಗಿದ್ದು, ಅಲ್ಲಿಗೆ ಸೇರಿದ ವಿಶ್ವಾಸಿಗಳು ಕರ್ತನಿಗೆ ಆಳವಾದ ಕೃತಜ್ಞತೆ ಮತ್ತು ಆರಾಧನೆಯೊಂದಿಗೆ ವಂದಿಸಿದರು. ಭಕ್ತಿಗೀತೆಗಳು, ಪ್ರಾರ್ಥನೆಗಳು ಹಾಗೂ ಶಾಂತಮಯ ವಾತಾವರಣ ಮೆರವಣಿಗೆಯನ್ನು ಇನ್ನಷ್ಟು ಆಧ್ಯಾತ್ಮಿಕವಾಗಿ ಉನ್ನತಗೊಳಿಸಿತು. ವಂ.ಸ್ವಾಮಿ, ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ಅವರು ಪವಿತ್ರ ಸಂಸ್ಕಾರದ ಆರಾಧನೆ ನಡೆಸಿ. ಚಿಕ್ಕ ಉಪನ್ಯಾಸ ನೀಡಿ, ಬಳಿಕ ಸೇರಿದ್ದ ಎಲ್ಲ ವಿಶ್ವಾಸಿಗಳಿಗೆ ದಿವ್ಯ ಪರಮ ಪ್ರಸಾದದ ಆಶೀರ್ವಾದವನ್ನು ನೀಡಿದರು.
ಪವಿತ್ರ ಸಂಸ್ಕಾರವನ್ನು ಭಕ್ತಿಯಿಂದ ಪಾದಯಾತ್ರೆಯಲ್ಲಿ ಹೊತ್ತುಕೊಂಡು ಹೋಗಿ, ಭಕ್ತಿಗೀತೆಗಳೊಂದಿಗೆ ನಡೆದ ಈ ಆಚರಣೆ ಆಳವಾದ ಭಕ್ತಿ ಮತ್ತು ನಂಬಿಕೆಯ ಸಾಕ್ಷಿಯಾಯಿತು. ಯುಕರಿಸ್ತಿಯ ಕೇಂದ್ರಿತ ಜೀವನದ ಮೂಲಕ ಚರ್ಚ್ ಸಮುದಾಯವನ್ನು ನಿರ್ಮಿಸುವ ಸಂದೇಶವನ್ನು ಈ ಭಾತೃತ್ವದ ದಿನವನ್ನು ಆಚರಣೆ ಸ್ಪಷ್ಟವಾಗಿ ಸಾರಿತು.

.
.
.
.
