
ಗದಗ, ಜ. 30: ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯದಲ್ಲಿ ಹಾವು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ.
ಕಳೆದ 13 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಉತ್ಖನನದಲ್ಲಿ ಈವರೆಗೆ 45ಕ್ಕೂ ಹೆಚ್ಚು ಪ್ರಾಚ್ಯಾವಶೇಷ ವಸ್ತುಗಳು, ನಿರ್ದಿಷ್ಟವಾಗಿ ಮೂರು ನಾಗರಶಿಲೆಗಳು ಪತ್ತೆಯಾಗಿದ್ದವು. ನಿನ್ನೆ ಮೂರು ಹೆಡೆಯ ಸರ್ಪ ಶಿಲೆ ದೊರೆತ ಬೆನ್ನಲ್ಲೇ, ಇಂದು ಬೆಳಗ್ಗೆ ಸುಮಾರು 2-2.5 ಅಡಿ ಉದ್ದದ ಹಾವು ಪ್ರತ್ಯಕ್ಷವಾಗಿದೆ.ಉತ್ಖನನ ನಡೆಯುತ್ತಿದ್ದ ಜಾಗದಲ್ಲೇ ಹಾವು ಚಲಿಸುತ್ತಿರುವುದನ್ನು ಗೋಳಪ್ಪ ಕೋಳಿವಾಡ ಎಂಬವರು ಗಮನಿಸಿದ್ದಾರೆ. ತಕ್ಷಣವೇ ಈ ವಿಷಯವನ್ನು ಉತ್ಖನನ ಕಾರ್ಯದ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ.ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಉತ್ಖನನ ಸಿಬ್ಬಂದಿ, ಎಚ್ಚರಿಕೆಯಿಂದ ಹಾವನ್ನು ಹಿಡಿದು ಹಾನಿ ಆಗದಂತೆ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.
ಈ ಘಟನೆ ಲಕ್ಕುಂಡಿಯ ನಿಧಿಗಳನ್ನು ಸರ್ಪಗಳು ಕಾಯುತ್ತವೆ ಎಂಬ ಸ್ಥಳೀಯರ ನಂಬಿಕೆ ಮತ್ತು ಚರ್ಚೆಗಳಿಗೆ ಹೊಸ ಆಯಾಮ ನೀಡಿದೆ.ಬೆಳಗ್ಗೆ 8:30ರ ಸುಮಾರಿಗೆ ಹಾವು ಕಾಣಿಸಿಕೊಂಡಿದ್ದು, ಸ್ಥಳೀಯ ಸೆಕ್ಯೂರಿಟಿ ಗಾರ್ಡ್ಗಳು ಮತ್ತು ನಿವಾಸಿಗಳು ಇದನ್ನು ಕಣ್ಣಾರೆ ಕಂಡಿದ್ದಾರೆ . ಉತ್ಖನನ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿರುವುದು ನಿಧಿ ಇರುವ ಸಂಕೇತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಘಟನೆಯ ಬಳಿಕ ಉತ್ಖನನ ಪ್ರದೇಶದಲ್ಲಿ ಇನ್ನಷ್ಟು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.


.
.
.
.
