

.
.
.
.

ಕಾರ್ಕಳ,ಫೆ.04: ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇದರ ಸಹ ಸಮಿತಿ ಮಲೆಕುಡಿಯ ಜಿಲ್ಲಾ ಶೈಕ್ಷಣಿಕ ಸಮಿತಿಯ ಆಶ್ರಯದಲ್ಲಿ ಮಾಳ-ಪೇರಡ್ಕದಲ್ಲಿರುವ ಸಮುದಾಯ ಭವನದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಪ್ರೌಢ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಓದು ಪರೀಕ್ಷಾ ತಯಾರಿ ಮತ್ತು ಪೋಷಕರು ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಫೆ.1 ರಂದು ನಡೆಯಿತು.ತರಬೇತುದಾರರಾದ ನೋನಯ್ಯ ರೆಂಜಾಳ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಮಾತನಾಡಿ, ಶಿಕ್ಷಣವು ಹೃದಯದಿಂದ ಮೂಡಿ ಹೃದಯವಂತಿಕೆಯಿಂದ ಕೂಡಿರಬೇಕು ಎಂದರು.ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ಜಿಲ್ಲಾ ಮಲೆಕುಡಿಯ ಸಂಘವು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸತತವಾಗಿ ಸಹಕರಿಸುತ್ತದೆ ಎಂದರು.ವೇದಿಕೆಯಲ್ಲಿ ಪುಷ್ಪ ರೆಂಜಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 78 ಮಂದಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.ಬೆಂಗಳೂರಿನ ಉದ್ಯಮಿ ವಿಕಾಸ್ ಭಟ್ರವರ ನೆರವಿನಿಂದ ಶ್ರೀ ಸತ್ಯ ಸಾಯಿ ಭಕ್ತ ಮಂಡಳಿ ಬೆಂಗಳೂರು ಇದರ ಆಶ್ರಯದಿಂದ ಶ್ರೀ ಯಾದಳಂ ಗಂಗಾಧರ ಶೆಟ್ಟಿಯವರ ಸಹಕಾರದಿಂದ 12 ವಿದ್ಯಾರ್ಥಿಗಳಿಗೆ ತಿಂಗಳಿಗೆ 42 ಸಾವಿರ ಮಾಸಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಈ ಸಮಾರಂಭದಲ್ಲಿ 10 ವಿದ್ಯಾರ್ಥಿಗಳಿಗೆ ಮತ್ತು ಇತರ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣೆ ಮಾಡಲಾಯಿತು.ನವೀನ್ ಕುಮಾರ್ ತೆಳ್ಳಾರ್ ಸ್ವಾಗತಿಸಿ, ಶಿಕ್ಷಕಿ ಪುಷ್ಪ ಕಾರ್ಯಕ್ರಮ ನಿರೂಪಿಸಿದರು. ಸುಜಾತ ವಂದಿಸಿದರು.

.
.
.
.