
ಕಾರ್ಕಳ,ಮಾ.01:ಸಾವಿರಾರು ರೈತರ ಕೃಷಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿರುವ ಎಣ್ಣೆಹೊಳೆ ಏತ ನೀರಾವರಿ ಘಟಕಕ್ಕೆ ಇದೀಗ ಗ್ರಹಣ ಬಡಿದಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಯೋಜನೆಯ ಸುಮಾರು 2 ಕೋ.ರೂ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದೆ. ಈ ಮೂಲಕ
ರೈತರಿಗೆ ನೀರಾವರಿ ಒದಗಿಸಲು ಅಸಮರ್ಥವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಅಜೆಕಾರು- ಎಣ್ಣೆಹೊಳೆ- ಹಿರ್ಗಾನ ಗ್ರಾಮಗಳ ನೂರಾರು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ
ಈ ಯೋಜನೆಯನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈಗ ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಸಮಸ್ಯೆ ಹಿಂದಿನ ವರ್ಷಗಳಿಗಿಂತ ತೀವ್ರ ಪ್ರಮಾಣದಲ್ಲಿ ಬಾಧಿಸುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ಈ ಏತ ನೀರಾವರಿ ಯೋಜನೆಗೆ ಸಂಬಂಧಪಟ್ಟ 2 ಕೋಟಿ ರೂ.ಗೂ ಅಧಿಕ ವಿದ್ಯುತ್ ಬಾಕಿ ನೆಪದಲ್ಲಿ ಸಂಪರ್ಕ ಕಡಿತ ಮಾಡಿರುವುದು ಅಸಮಂಜಸ ಹಾಗೂ ರೈತ ವಿರೋಧಿ ಕ್ರಮ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂಧನ ಇಲಾಖೆಯ ನಿರ್ವಹಣೆ ಹಾಳು ಬಿದ್ದು ಹೋಗಿದೆ. ಹೀಗಾಗಿ ಮೆಸ್ಕಾಂ ಏತ ನೀರಾವರಿ ಯೋಜನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೂರು ದಿನ ಕಳೆದರೂ ಸರ್ಕಾರ ಮೌನಕ್ಕೆ ಶರಣಾಗಿರುವುದು ಖಂಡನೀಯ, ರೈತರ ಬದುಕಿನ ಜೊತೆ ಚೆಲ್ಲಾವಾಡಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಸುನಿಲ್ ಎಚ್ಚರಿಸಿದ್ದಾರೆ


.
.
.
.
.
.
.
.
.
.
