
ಬೆಂಗಳೂರು,ಮಾ.13 : ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ವಾರ್ಷಿಕ ಆದಾಯದ ಮಿತಿಯನ್ನು 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡುವ ಕುರಿತು ಸರ್ಕಾರ ನಿಧಾರ ಕೈಗೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಧಾನ ಸಭೆಗೆ ತಿಳಿಸಿದರು.
ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಬಿಪಿಎಲ್ ಕಾರ್ಡ್ ಪಡೆಯಲು ಈಗ ಇರುವ ನಿಯಮಗಳು 2017ರಲ್ಲಿ ರಚನೆಯಾಗಿದ್ದು, ಈಗ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ 8 ವರ್ಷದಿಂದ ಅದೇ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ಎಂದರು.
ಅದರಲ್ಲೂ ಇಡೀ ರಾಜ್ಯಕ್ಕೆ ಈ ನಿಯಮಗಳನ್ನು ಅನ್ವಯಿಸುವುದೂ ಸರಿಯಲ್ಲ. ಬೆಂಗಳೂರಿನ ಜೀವನ ನಿರ್ವಹಣಾ ವೆಚ್ಚಕ್ಕೂ, ಗ್ರಾಮಾಂತರ ಪ್ರದೇಶಗಳ ನಿರ್ವಹಣಾ ವೆಚ್ಚಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಎರಡೂ ಪ್ರದೇಶಗಳಿಗೆ ಏಕರೂಪದ ಆದಾಯ ಮಿತಿ ನಿಗದಿಪಡಿಸುವುದು ತಪ್ಪು. ಇದನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ವಿಧವೆಯರು, ವಿಕಲಚೇತನರು, ಮಾರಕ ರೋಗಗಳಿಂದ ಬಳಲುತ್ತಿರುವವರ ಕುಟುಂಬಕ್ಕೆ ಬಿಪಿಎಲ್‌ಗಿಂತ ಅಂತ್ಯೋದಯ ಅನ್ನ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಇಂತಹ ಎಷ್ಟೋ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ಕೊಡಲಾಗಿದೆ. ಟ್ಯಾಕ್ಸಿ, ಆಟೋ ಚಾಲಕರ ಬಿಪಿಎಲ್ ಕಾರ್ಡ್ಗಳು ರದ್ದಾಗಿವೆ. ಇವೆಲ್ಲ ಆಹಾರ ಭದ್ರತಾ ಕಾಯ್ದೆಯ ಉಲ್ಲಂಘನೆಯಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು.


.
.
.
.
.
.
.
.
.
.
