
ಕಾರ್ಕಳ, ಜೂ.16: ಕಾರ್ಕಳದ ಕಾಬೆಟ್ಟಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದು ಇದು ನಿಯಮಬಾಹಿರವಾಗಿದ್ದು, ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.
ಮಂಗಳವಾರ ಕಾರ್ಕಳ ಪತ್ರಿಕಾ ಭವನದಲ್ಲಿ ಈ ಕುರಿತು ಸುದ್ಧಿಗೋಷ್ಟಿ ನಡೆಸಿದ ಮಾತನಾಡಿದ ದಲಿತ ಮುಖಂಡ ಗೋವರ್ಧನ ಅವರು, ಈ ಹಿಂದೆ ಜೂ. 4 ರಂದು ಅಂಬೇಡ್ಕರ್ ಭವನದ ನಿರ್ವಹಣಾ ಸಮಿತಿಗೆ ಸದಸ್ಯರ ಆಯ್ಕೆ ಕುರಿತು ಪೂರ್ವಭಾವಿ ಸಭೆಯನ್ನು ತಹಶಿಲ್ದಾರ್ ಕಚೇರಿಯಲ್ಲಿ ಕರೆಯಲಾಗಿತ್ತು.ಈ ಸಭೆಗೆ ಎಲ್ಲಾ ದಲಿತ ಸಂಘಟನೆಗಳು ಮುಖಂಡರಿಗೂ ಅಧಿಕೃತವಾಗಿ ಆಹ್ವಾನಿಸಲಾಗಿತ್ತು.ಆದರೆ ಏಕಾಎಕಿ ಜೂ.4 ರ ಸಭೆ ರದ್ದಾಗಿದ್ದು ಮುಂದಿನ ದಿನಾಂಕ ತಿಳಿಸುವುದಾಗಿ ಜೂ. 3 ರಂದು ಸಮಾಜ ಕಲ್ಯಾಣ ಇಲಾಖೆ ಕಚೇರಿಯಿಂದ ಕರೆ ಬಂದಿತ್ತು. ಈ ಸಭೆ ರದ್ದಾದ ಬಳಿಕ ಮತ್ತೆ ಸಭೆ ನಡೆಸದೇ ಮೂವರು ಸದಸ್ಯರನ್ನು ಅನಧಿಕೃತವಾಗಿ ನಾಮನಿರ್ದೇಶನ ಮಾಡಿರುವುದಕ್ಕೆ ಬಲವಾದ ಆಕ್ಷೇಪಣೆ ಇದೆ ಎಂದು ಗೋವರ್ಧನ ತಿಳಿಸಿದರು.
ರದ್ದಾದ ಪೂರ್ವಭಾವಿ ಸಭೆ ಮತ್ತೆ ನಡೆಸದೇ ಅಧಿಕಾರಿಗಳು ನಮ್ಮ ಗಮನಕ್ಕೆ ತರದೇ ಏಕಪಕ್ಷೀಯವಾಗಿ ಸದಸ್ಯರನ್ನು ನಾಮನಿರ್ದೇಶನ ಮಾಡಿರುವುದು ಸರಿಯಲ್ಲ, ಅದ್ದರಿಂದ ಜಿಲ್ಲಾಧಿಕಾರಿಗಳು ಮೂವರು ನಾಮನಿರ್ದೇಶಿತ ಸದಸ್ಯರನ್ನು ವಜಾಗೊಳಿಸಿ ಮತ್ತೆ ಸಭೆ ನಡೆಸಿ ಹೊಸದಾಗಿ ಸದಸ್ಯರ ನಾಮನಿರ್ದೇಶನ ಮಾಡುವಂತೆ ಗೋವರ್ಧನ ಅವರು ಮನವಿ ಮಾಡಿದ್ದಾರೆ.
ಈ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸದಿದ್ದಲ್ಲಿ ದಲಿತ ಸಂಘಟನೆಗಳ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಸುಧಾಕರ ದಾನಶಾಲೆ, ಹರೀಶ್ ಬಜಗೋಳಿ,ಸುನೀತಾ ಅಂಡಾರು ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
