

ಕಾರ್ಕಳ, ಸೆ.02: ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಜಟಾಪಟಿ ಆರಂಭವಾಗಿದೆ.
ಶಾಸಕ ಸುನಿಲ್ ಕುಮಾರ್ ಮನೆಗೆ ಸ್ಟಿಕ್ಕರ್ ಅಂಟಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಅರ್ಧದಲ್ಲೇ ತಡೆದು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.
ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಸ್ಟಿಕ್ಕರ್ ಅಭಿಯಾನ ಆರಂಭಿಸಿದ ಕೈ ಕಾರ್ಯಕರ್ತರು ಸುನಿಲ್ ಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿ ಹೊರಟ ವೇಳೆ ಪೊಲೀಸರು ಕಾರ್ಕಳದ ಸರ್ವಜ್ಞ ಸರ್ಕಲ್ ಬಳಿ ವಶಕ್ಕೆ ಪಡೆದರು.

ಶಾಸಕ ಸುನಿಲ್ ಕುಮಾರ್ ಅವರು ಪರಶುರಾಮನ ನಕಲಿ ಪ್ರತಿಮೆ ಪ್ರತಿಷ್ಠಾಪಿಸಿದ್ದಾರೆ ಆದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಶುಭದ ರಾವ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಗ್ರಾಮ ಮಟ್ಟದಲ್ಲಿ ಸ್ಟಿಕ್ಕರ್ ಅಭಿಯಾನ ಆರಂಭಿಸಲಾಗುವುದು,ಈ ಅಭಿಯಾನಕ್ಕೆ ಸುನಿಲ್ ಕುಮಾರ್ ಮನೆಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಆರಂಭಿಸಲಾಗುವುದು ಎಂದು ಸವಾಲು ಹಾಕಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನಗಳಿಂದ ಶಾಸಕ ಸುನಿಲ್ ಮನೆ ಹಾಗೂ ಕಚೇರಿಗೆ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.
ಸ್ಟಿಕ್ಕರ್ ಅಭಿಯಾನದ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕರ ಮನೆ ಹಾಗೂ ಕಚೇರಿ ಬಳಿ ಜಮಾಯಿಸಿದ್ದರು. ಕಾಂಗ್ರೆಸ್ ಸ್ಟಿಕ್ಕರ್ ಅಭಿಯಾನ ವಿಫಲವಾದ ಬಳಿಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮುಟ್ಲುಪಾಡಿ ಸತೀಶ್ ಶೆಟ್ಟಿ ಮಾತನಾಡಿ, ಸುನಿಲ್ ಕುಮಾರ್ ಮನೆಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನ ಆರಂಭಿಸಿದ ಕಾಂಗ್ರೆಸ್ ನಾಯಕರು ರಣಹೇಡಿಗಳು. ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಸುನಿಲ್ ಕುಮಾರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಇದಲ್ಲದೇ ಅವರು ಆರೋಪಿಯಲ್ಲ, ಆದರೂ ಕಾಂಗ್ರೆಸ್ ನಾಯಕರು ಸುಳ್ಳು ಆರೋಪ ಅಪಪ್ರಚಾರ ನಡೆಸುತ್ತಿದ್ದಾರೆ.ಆದ್ದರಿಂದ ಸುಳ್ಳು ಸುದ್ದಿ ಹಬ್ಬಿಸುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಸುಮೊಟು ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು. ಇಂತಹ ಘಟನೆ ಮರುಕಳಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಕಾರ್ಕಳ ಎಎಸ್ಪಿ ಹಾಗೂ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.





.
.
.
.
.
.
.
.
.
.
.
.
.
.
.
.
.
.
.
.
