

ಬೆಳ್ತಂಗಡಿ,ನ.4: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು 14 ವರ್ಷಗಳ ಹಳೆಯ ಡಿಎನ್ಎ ವರದಿ ಮತ್ತು ಹೊಸ ಮಾದರಿಗಳ ಮರುಪರೀಕ್ಷೆಯ ಮೂಲಕ ಸಾವಿನ ರಹಸ್ಯವನ್ನು ಬೇಧಿಸಲು ಸಜ್ಜಾಗಿದೆ. ಸುಪ್ರೀಂ ಕೋರ್ಟ್ ನೀಡಿದ ಮರುತನಿಖೆಯ ಆದೇಶದ ಬೆನ್ನಲ್ಲೇ ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ, ವಿಧಿವಿಜ್ಞಾನ ಪ್ರಯೋಗಾಲಯದ ನಿರ್ಣಾಯಕ ವರದಿಗಾಗಿ ಕಾಯುತ್ತಿದೆ.
ಘಟನೆ ನಡೆದ ಸಮಯದಲ್ಲಿ ಸಂಗ್ರಹಿಸಲಾಗಿದ್ದ ವೆಜಿನಲ್ ಸ್ವಾಬ್ ಹಾಗೂ ಚೂಡಿದಾರ್ ಮೇಲಿದ್ದ ಕೂದಲಿನ ಮಾದರಿಗಳನ್ನು ಎಸ್ಐಟಿ ತನಿಖಾ ತಂಡವು ಮರುಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. 2012ರ ಅಕ್ಟೋಬರ್ 10ರಂದು ಖಾಕಿ ಪಡೆ ಈ ಸ್ವಾಬ್ ಮಾದರಿಯನ್ನು ಸಂಗ್ರಹಿಸಿತ್ತು. ಬೆಳ್ತಂಗಡಿ ಠಾಣೆ ಪೊಲೀಸರು ಅಕ್ಟೋಬರ್ 20ರಂದು ಇದನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಆಗ ಫಂಗಸ್ ಬಂದಿದೆ ಎಂಬ ವರದಿ ಬಂದಿತ್ತು. ಆದರೆ, ಈಗ ಅದೇ ಸ್ವಾಬ್ ಮಾದರಿಯನ್ನು ಮರುಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಮರುಪರೀಕ್ಷೆಯನ್ನು ಫಂಗಸ್ ಬಂದಿದ್ದರೂ ಡಿಎನ್ಎ ಪರೀಕ್ಷೆ ಮಾಡಿ ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರುವ ಹೈದರಾಬಾದ್ನ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿದೆ.
ತನಿಖೆಯ ಭಾಗವಾಗಿ ಇತ್ತೀಚೆಗೆ ಸೌಜನ್ಯ ತಾಯಿ ಕುಸುಮಾವತಿ ಅವರ ರಕ್ತದ ಮಾದರಿಯನ್ನು ನ್ಯಾಯಾಧೀಶರ ಸಮ್ಮುಖದಲ್ಲೇ ಪಡೆದು ಡಿಎನ್ಎ ಪ್ರೊಫೈಲಿಂಗ್ಗಾಗಿ ಕಳುಹಿಸಲಾಗಿದೆ. ಹಳೆಯ ಮಾದರಿಗಳಿಂದ ಸಿಗಬಹುದಾದ ಡಿಎನ್ಎ ಅಂಶಗಳನ್ನು ಪ್ರಸ್ತುತ ಶಂಕಿತರ ಡಿಎನ್ಎ ಜೊತೆ ಹೋಲಿಕೆ ಮಾಡಿ, ಘಟನೆಯ ಹಿಂದಿರುವ ಅಸಲಿ ಅಪರಾಧಿಗಳನ್ನು ಪತ್ತೆಹಚ್ಚಲು ಎಸ್ಐಟಿ ಯೋಜಿಸಿದೆ. ಎಸ್ಐಟಿ ಈಗಾಗಲೇ ಸೌಜನ್ಯ ಮೃತದೇಹ ಪತ್ತೆಯಾಗಿದ್ದ ಮಣ್ಣಸಂಕ ಕಾಡಿನ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದರೊಂದಿಗೆ ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಯೋಗಾಲಯದಿಂದ ಬರಲಿರುವ ಡಿಎನ್ಎ ವರದಿಯು ಈ ಇಡೀ ಪ್ರಕರಣಕ್ಕೆ ಅತ್ಯಂತ ನಿರ್ಣಾಯಕ ತಿರುವು ನೀಡಲಿದ್ದು, ವರ್ಷಗಳಿಂದ ಮುಚ್ಚಿಹೋಗಿರುವ ಸೌಜನ್ಯ ಸಾವಿನ ರಹಸ್ಯವನ್ನು ಬಯಲಿಗೆಳೆಯುವ ನಿರೀಕ್ಷೆ ಮೂಡಿಸಿದೆ.





.
.
.
.
.
.
.
.
.
.
.
.
.
.
.
.
.
.
.
.
