ಕಾರ್ಕಳ: ಹೋಮ್ ನರ್ಸ್ ಸೋಗಿನಲ್ಲಿ ಯುವಕನೋರ್ವ ಅಮಾಯಕ ವೃದ್ಧನ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕಾರ್ಕಳ ನಗರ ಠಾಣಾ ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ.
ತೆಳ್ಳಾರ್ ನಿವಾಸಿ ರತ್ನಾಕರ ಸುವರ್ಣ(50) ಹಾಗೂ ಕುಕ್ಕುಂದೂರು ಕುಪ್ಪಬೆಟ್ಟು ಮನೆ ನಿವಾಸಿ ಕಾರ್ತಿಕ್ ಶೆಟ್ಟಿ(28) ಬಂಧಿತ ಆರೋಪಿಗಳು.
ಏನಿದು ಪ್ರಕರಣ:
ಕಾರ್ಕಳ ಪುರಸಭೆ ವ್ಯಾಪ್ತಿಯ ನಿವಾಸಿ 75 ವರ್ಷದ ಶಶಿಧರ್ ಅವರು ಒಂಟಿಯಾಗಿ ವಾಸವಿದ್ದರು. ಇದನ್ನು ಅರಿತ ಆರೋಪಿ ರತ್ನಾಕರ ಸುವರ್ಣ ಶಶಿಧರ್ ಅವರಿಗೆ ಸಹಾಯ ಮಾಡುವ ನೆಪದಲ್ಲಿ ರತ್ನಾಕರ್ ಸುವರ್ಣ ಅಲೈಟ್ ಕೇರ್ ಎಂಬ ಸಂಸ್ಥೆ ಸ್ಥಾಪಿಸಿ ಹೋಮ್ ನರ್ಸ್ ಕೆಲಸಕ್ಕೆ ಜನ ಕಳುಹಿಸುತ್ತಿದ್ದ.ಅದರ ಮೂಲಕ ಕಾರ್ತಿಕ್ ಶೆಟ್ಟಿ ಶೆಟ್ಟಿ ಯನ್ನು ಹೋಮ್ ನರ್ಸ್ ಆಗಿ ಕಳುಹಿಸಿದ್ದ. ವಯೊವೃದ್ದ ಶಶಿಧರ್ ಅವರು ಆರ್ಥಿಕ ವ್ಯವಸ್ಥೆಯಲ್ಲೂ ತಕ್ಕಮಟ್ಟಿಗೆ ಸುದೃಢರಾಗಿದ್ದ ವಿಚಾರ ಅರಿತ ಇವರಿಬ್ಬರು ಅವರ ಅಸಹಾಯಕತೆಯನ್ನು ದಾಳವಾಗಿ ಮಾಡಿಕೊಂಡ ಹಣ ಲಪಟಾಯಿಸುವ ತಂತ್ರ ಹೆಣೆದಿದ್ದರು.
ಕಳೆದ ನ.9ರಂದು ಆರೋಪಿ ರತ್ನಾಕರ ಸುವರ್ಣ ತಾನು ಕಳುಹಿಸಿಕೊಟ್ಟ ಹೋಂ-ನರ್ಸ್ ಕಾರ್ತಿಕ್ ಶೆಟ್ಟಿ ಖಾತೆಗೆ ಗೂಗಲ್ ಪೇ ಮೂಲಕ 10 ಸಾವಿರ ರೂ. ಹಣ ಪಾವತಿಸುವಂತೆ ಶಶಿಧರ್ ಗೆ ಹೇಳಿದ್ದ, ಆದರೆ ಶಶಿಧರ್ ಅವರು ನಾನು ನಗದು ನೀಡುತ್ತೇನೆ ಎಂದಿದ್ದರು, ಇದಕ್ಕೆ ಒಪ್ಪದ ರತ್ನಾಕರ್ ಆನ್‌ಲೈನ್ ಮೂಲಕ ಪಾವತಿಸುವಂತೆ ಕೇಳಿದಾಗ ಶಶಿಧರ್ ಆನ್ ಲೈನ್ ಪೇಮೆಂಟ್ ಮೂಲಕ 10 ಸಾವಿರ ಹಣವನ್ನು ಕಾರ್ತಿಕ್ ಶೆಟ್ಟಿ ಖಾತೆಗೆ ವರ್ಗಾಯಿಸಿದ್ದರು. ಇತ್ತ ಆರೋಪಿಗಳು ಶಶಿಧರ್ ಗೆ ಮೋಸ ಮಾಡುವ ಉದ್ದೇಶದಿಂದ ಕಾರ್ತಿಕ್ ಶೆಟ್ಟಿ ಯುಪಿಐ ಪಾವತಿಯ ವೇಳೆ ಪಿನ್ ನಂಬರ್ ನೋಡಿದ್ದ,ಬಳಿಕ ಆರೋಪಿ ಕಾರ್ತಿಕ್ ಶೆಟ್ಟಿ ಶಶಿಧರ್ ಅವರ ಮೊಬೈಲ್ ನಿಂದ ತನ್ನ ಬ್ಯಾಂಕ್ ಖಾತೆಗೆ ಕಳೆದ ನ.10ರಿಂದ ನಿರಂತರವಾಗಿ ಡಿ.8ರವರೆಗೆ ಕಾರ್ಕಳದ ಯೂನಿಯನ್ ಬ್ಯಾಂಕ್ ಶಾಖೆಯ ಖಾತೆಯಿಂದ ಹಂತಹಂತವಾಗಿ ಗೂಗಲ್ ಪೇ ಮೂಲಕ ಬರೋಬ್ಬರಿ 9.80 ಲಕ್ಷ ರೂ.ವನ್ನು ಹಾಕಿಸಿಕೊಂಡಿದ್ದ.ಇತ್ತ ತನ್ನ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವ ವಿಚಾರ ತಿಳಿದುಕೊಂಡ ಶಶಿಧರ್ ಅವರು ನ್ಯಾಯಕ್ಕಾಗಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಆರೋಪಿಗಳು ಪರಾರಿಯಾಗಿದ್ದರು.
ವಂಚನೆ ಪ್ರಕರಣದ ಕುರಿತು ತನಿಖೆಗಿಳಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಹೆಣೆದಿದ್ದರು.
ಆರೋಪಿಗಳ ಮೊಬೈಲ್ ಟವರ್ ಲೊಕೇಶನ್ ಜಾಡು ಹಿಡಿದ ಕಾರ್ಕಳ ನಗರ ಠಾಣಾ ಪೊಲೀಸರು ಮುಂಬಯಿಯಲ್ಲಿ ಅವಿತ್ತಿದ್ದ ರತ್ನಾಕರ್ ಸುವರ್ಣ ಹಾಗೂ ಕಾರ್ತಿಕ್ ಶೆಟ್ಟಿಯನ್ನು ಬಂಧಿಸಿ ಕಾರ್ಕಳಕ್ಕೆ ಕರೆತಂದಿದ್ದಾರೆ.
ಒಂಟಿಯಾಗಿ ವಾಸಿಸುವ ಶ್ರೀಮಂತರನ್ನು ಸುಲಿಗೆ ಮಾಡುತ್ತಿದ್ದ ನಯವಂಚಕರನ್ನು ಪೊಲೀಸರು ಕಂಬಿಹಿಂದೆ ತಳ್ಳಿದ್ದಾರೆ.