ಕಾರ್ಕಳ: ಗಂಡ ಹೆಂಡತಿ ನಡುವಿನ ಕೌಟುಂಬಿಕ ಕಲಹವು ಕಾರ್ಕಳ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪತಿಯ ವಿರುದ್ಧ ಪತ್ನಿ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಠಾಣೆಗೆ ಕರೆಸಿಕೊಂಡ ಪೊಲೀಸರು ವಿಚಾರಣೆ ನಡೆಸದೇ ನನ್ನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯ ಪತಿ ಆರೋಪಿಸಿದ್ದಾನೆ. ಆದರೆ ಈ ಆರೋಪವನ್ನು ಪೊಲೀಸರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಮಂಜರಾಯಿ ಎಂಬಲ್ಲಿನ ನಿವಾಸಿ ಕಲ್ಲುಕೋರೆ ಕಾರ್ಮಿಕ ಮಣಿಕಂಠ ಹಾಗೂ ಆತನ ಪತ್ನಿ ಆಶಾ ನಡುವೆ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆತನ ಪತ್ನಿ ಆಶಾ ಅ.15ರಂದು ಮಂಗಳವಾರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಳು. ಈ ದೂರಿನಲ್ಲಿ ತನಗೆ ಹಾಗೂ ಮಕ್ಕಳಿಗೆ ಮಣಿಕಂಠ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿತ್ತು. ತನ್ನ ವಿರುದ್ಧ ಪತ್ನಿ ನೀಡಿದ ಸುಳ್ಳು ದೂರಿನ ವಿಚಾರಣೆಯನ್ನು ನಡೆಸದೇ ಏಕಾಎಕಿ ನನ್ನನ್ನು ಠಾಣೆಗೆ ಕರೆದೊಯ್ದು ಅವಾಚ್ಯವಾಗಿ ನಿಂದಿಸಿ ಬಳಿಕ ಪೊಲೀಸರು ಎರಡೆರಡು ಬಾರಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ ಎಂದು ಮಣಿಕಂಠ ಆರೋಪಿಸಿದ್ದಾನೆ. ಪೊಲೀಸರು ನನ್ನ ಕೈ ಕಾಲುಗಳಿಗೆ ಹೊಡೆದು ಮನೆಗೆ ಕಳುಹಿಸಿದ್ದಾರೆ, ಆದರೆ ತೀವೃ ಹಲ್ಲೆಯಿಂದ ನನಗೆ ನಡೆಯಲೂ ಸಾಧ್ಯವಾಗದ ಕಾರಣದಿಂದ ಮತ್ತೆ ಚಿಕಿತ್ಸೆಗೆ ದಾಖಲಾಗಿರುವುದಾಗಿ ಮಣಿಕಂಠ ಹೇಳಿದ್ದಾನೆ.
ಮಣಿಕಂಠನ ಮೇಲಿನ ಹಲ್ಲೆ ಆರೋಪವನ್ನು ಕಾರ್ಕಳ ಪೊಲೀಸರು ನಿರಾಕರಿಸಿದ್ದು, ಇದು ಗಂಡ ಹೆಂಡತಿಯ ನಡುವಿನ ಜಗಳವಾಗಿದ್ದು, ಮಣಿಕಂಠ ಮದ್ಯಪಾನ ಮಾಡಿಕೊಂಡು ಪತ್ನಿಗೆ ಹಲ್ಲೆ ನಡೆಸುತ್ತಿದ್ದ ಎಂದು ದೂರಿನ ಹಿನ್ನಲೆಯಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಣಿಕಂಠ ಗುರುವಾರ ಬೆಳಗ್ಗೆ ಮತ್ತೆ ಚಿಕಿತ್ಸೆಗೆಂದು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಆತನ ತಪಾಸಣೆ ನಡೆಸಿದ್ದು, ಈತ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ, ಆತನಿಗೆ ಚಿಕಿತ್ಸೆ ನೀಡಲು ಕಾರ್ಕಳ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯರಿಲ್ಲದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಲಾ ಸ್ಪಷ್ಟಪಡಿಸಿದ್ದಾರೆ.