ಕಾರ್ಕಳ,ಸೆ.06: ಕಳೆದ ಎರಡು ತಿಂಗಳಿನಿAದ ಧರ್ಮಸ್ಥಳ ಕ್ಷೇತ್ರದ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ನಿರಂತರ ಅಪಪ್ರಚಾರವನ್ನು ಖಂಡಿಸಿ ಸೆ 10 ರಂದು ಕಾರ್ಕಳದಲ್ಲಿ ಬೃಹತ್ ಜನಾಗ್ರಹ ಸಭೆ ನಡೆಯಲಿದೆ ಎಂದು ಕಾರ್ಕಳ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯ ಸಂಚಾಲಕ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು.
ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಕೇವಲ ಧಾರ್ಮಿಕ ಚಟುವಟಿಕೆಗಳನ್ನು ಬಿಟ್ಟರೆ ಯಾವುದೇ ಸಮಾಜಮುಖಿ ಕೆಲಸಗಳನ್ನು ಮಾಡುವುದಿಲ್ಲ. ಆದರೆ ಧರ್ಮಸ್ಥಳ ಕ್ಷೇತ್ರವು ಧಾರ್ಮಿಕತೆಯ ಜತೆಗೆ ಗ್ರಾಮೀಣ ಅಭಿವೃದ್ದಿ, ಮಹಿಳಾ ಸಬಲೀಕರಣ, ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ತನ್ನ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಸಾಮಾಜಿಕ ಕಾರ್ಯಗಳ ಮೂಲಕ ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೆಸರು ಗಳಿಸಿದ್ದು ಇದರ ಹೆಸರು ಕೆಡಿಸಲು ಬಹುದೊಡ್ಡ ಜಾಲವೊಂದು ಷಡ್ಯಂತ್ರ ನಡೆಸುತ್ತಿದೆ. ಇಂತಹ ಪಿತೂರಿಗಳ ವಿರುದ್ಧ ಎಲ್ಲಾ ವರ್ಗದ ಸಮಾಜದ ಬಂಧುಗಳು ಹೋರಾಟ ನಡೆಸಬೇಕೆಂದು ರವೀಂದ್ರ ಶೆಟ್ಟಿ ಮನವಿ ಮಾಡಿದರು.
ಈ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶಾಸ ಸುನಿಲ್ ಕುಮಾರ್, ಬೋಳ ಪ್ರಭಾಕರ ಕಾಮತ್,ನೀರೆ ಕೃಷ್ಣ ಶೆಟ್ಟಿ,ಭಾಸ್ಕರ್ ಕೋಟ್ಯಾನ್ ಮುಂತಾದವರು ಭಾಗವಹಿಸಲಿದ್ದಾರೆ. ಸಾಮಾಜಿಕ ಕಾರ್ಯಕರ್ತ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ರವೀಂದ್ರ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಕಡಾರಿ ರವೀಂದ್ರ ಪ್ರಭು, ವೃಷಭರಾಜ್ ಕಡಂಬ, ಎರ್ಲಪಾಡಿ ಉದಯಕುಮಾರ್ ಹೆಗ್ಡೆ, ಮೋಹನ್ ಪಡಿವಾಳ್, ಕಮಲಾಕ್ಷ ನಾಯಕ್ ಜಾರ್ಕಳ, ಪ್ರಭಾತ್ ಕುಮಾರ್ ಉಪಸ್ಥಿತರಿದ್ದರು.