ಕಾರ್ಕಳ: ಮಾನಸ ಕಲಾ ಶಾಲೆಯು ಕಳೆದ 25 ವರ್ಷಗಳಿಂದ ಗ್ರಾಮೀಣ ಬಡ ಮಕ್ಕಳಿಗೆ ಸೇವಾ ರೂಪದ ಚಿತ್ರ ಕಲಾ ಶಿಕ್ಷಣ ಪ್ರಾರಂಭಿಸಿ, ತನ್ನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿ ನಡೆಸುತ್ತಿದೆ. ಮಾನಸ ಕಲಾ ಸಂಸ್ಥೆ ಕಲಾ ವೈವಿಧ್ಯತೆಯ ಪ್ರತೀಕ. ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಕಾರ್ಕಳ SVT ವನಿತಾ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ದೇವದಾಸ್ ಕೆರೆಮನೆ ಹೇಳಿದರು.
ಅವರು ಮಾನಸ ಕಲಾ ಸಂಸ್ಥೆ (ರಿ.) ಬಜಗೋಳಿ ಇದರ ವತಿಯಿಂದ ಕಾರ್ಕಳದ ಯು.ಬಿ.ಎಂ.ಸಿ.ಶಾಲೆಯಲ್ಲಿ ಆಯೋಜಿಸಿದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ,ಮಾನಸ ಕಲಾ ಶಾಲೆಗೆ ಸೇರಿದ ವಿದ್ಯಾರ್ಥಿಗಳು ಚಿತ್ರ ಕಲೆಯ ಜೊತೆ ಜೊತೆಗೆ ವ್ಯಕ್ತಿತ್ವ ವಿಕಸನದ ಪಾಠಗಳನ್ನು ಕಲಿಯುತ್ತಾರೆ. ರಂಗಭೂಮಿಯ ರಂಗ ಆಟಗಳು, ಚಟ್ ಫಟ್ ಚಿತ್ರ, ಕ್ರಾಫ್ಟ್, ವರ್ಲಿ, ಮಣ್ಣಿನ ಬಣ್ಣ, ಮುಖವರ್ಣಿಕೆ, ಪ್ರಶ್ನಾಲೋಕ, ಮೆದುಳಿಗೆ ಮೇವು, ಕಸದಿಂದ ರಸ ಹೀಗೆ ಹತ್ತು ಹಲವು ವಿಷಯಗಳ ಜ್ಞಾನ ಪಡೆಯಲು ಸಾಧ್ಯ ಎಂದರು.
ಮಾನಸ ಕಲಾ ಸಂಸ್ಥೆ(ರಿ.) ಬಜಗೋಳಿ ಇದರ ಸಂಸ್ಥಾಪಕ ಚಂದ್ರನಾಥ ಬಜಗೋಳಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಾನವ ಕಲಾ ಸಂಸ್ಥೆ ಇನ್ನಷ್ಟು ಬೆಳೆಯಬೇಕು. ಅದಕ್ಕಾಗಿ ತನ್ನದೇ ಆದ ಅಧಿಕೃತ ಸೂರಿನ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳ, ವಿದ್ಯಾರ್ಥಿಗಳ ಪೋಷಕರ, ದಾನಿಗಳ ನೆರವನ್ನು ಕೋರುತ್ತೇನೆ ಎಂದರು. ಇದುವರೆಗೆ ಮಾನಸ ಕಲಾ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಂಡು ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಶುಭಲಕ್ಷ್ಮೀ ಮತ್ತು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.