ಉತ್ತರ ಪ್ರದೇಶ: ಪ್ರಯಾಗ್ರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಹಲವು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಹಲವು ಮಂದಿಗೆ ಉಸಿರಾಟದ ಸಮಸ್ಯೆ ಎದುರಿಸಿದರು.
ಸುಮಾರು 25-30 ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೌನಿ ಅಮವಾಸ್ಯೆಯಂದು ಅಮೃತ ಸ್ನಾನವು ಮಹಾ ಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಎರಡು ಡಜನ್‌ಗೂ ಹೆಚ್ಚು ಆಂಬ್ಯುಲೆನ್ಸ್ ವಾಹನಗಳು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿವೆ. 10 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಆಂಬ್ಯುಲೆನ್ಸ್ ವಾಹನಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಎಲ್ಲ ರಸ್ತೆಗಳಲ್ಲೂ ಜನಜಂಗುಳಿ ಕಾಣಿಸುತ್ತಿದೆ. ಸ್ನಾನಘಟ್ಟದ ಬಳಿ ನೆರೆದಿದ್ದ ಜನಜಂಗುಳಿಯಿಂದ ಕೆಲ ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮಹಾಕುಂಭದಲ್ಲಿ ನೆರೆದಿದ್ದ ಅಪಾರ ಭಕ್ತಾದಿಗಳಿಂದ ಪರಿಸ್ಥಿತಿ ಹತೋಟಿ ತಪ್ಪಿದೆ. ಈ ವೇಳೆ ಸ್ಥಳದಲ್ಲಿ ಆಕ್ರೋಶ ವ್ಯಕ್ತವಾಯಿತು. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.