ಬೆಂಗಳೂರು: ಮೆಟ್ರೋ ರೈಲು ಬರುತ್ತಿದ್ದಂತೆಯೇ ಹಳಿ ಮೇಲೆ ಜಿಗಿದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಬಳಿ ಮಧ್ಯಾಹ್ನ 2.10ರ ವೇಳೆಗೆ ಈ ದುರ್ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿಯನ್ನು ನ್ಯಾಷನಲ್ ಲಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಧ್ರುವ್ ಎಂದು ಗುರುತಿಸಲಾಗಿದೆ.
ಮೆಟ್ರೋ ರೈಲಿನಡಿ ಸಿಲುಕಿದ್ದ ಧ್ರುವ್ ಶವವನ್ನು ಹರಸಾಹಸಪಟ್ಟು ಹೊರ ತೆಗೆಯಲಾಯಿತು. ಆತನ ರುಂಡ, ಮುಂಡ ಬೇರ್ಪಟ್ಟಿದ್ದು, ದೇಹ ಛಿದ್ರಗೊಂಡಿತ್ತು. ಆದರೆ ವಿದ್ಯಾರ್ಥಿ ಧ್ರುವ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಮೆಟ್ರೋ ಪಿಆರ್ ಒ ಯಶವಂತ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊಬೈಲ್ ನಲ್ಲಿ ಮಾತನಾಡಿಕೊಂಡೇ ಹಳಿ ಮೇಲೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಘಟನೆಯಿಂದ ವೈಟ್ ಫೀಲ್ಡ್ ನಿಂದ ಚಲ್ಲಘಟ್ಟ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕೆಲಕಾಲ ಮಾಗಡಿ ರಸ್ತೆ ಮತ್ತು ವೈಟ್ ಫೀಲ್ಡ್ ನಡುವಣ ಮಾತ್ರ ರೈಲು ಸಂಚಾರವಿತ್ತು. ಮಾಗಡಿ ರಸ್ತೆ ಮತ್ತು ಚಲ್ಲಘಟ್ಟ ನಡುವೆ ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತವಾಗಿತ್ತು. ಚಂದ್ರಾ ಲೇಔಟ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಬಿಎಂಆರ್ ಸಿಎಲ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಭೇಟಿ ನೀಡಿದ್ದು ಮಹಜರು ನಡೆಸುತ್ತಿರುವುದರಿಂದ ತಾತ್ಕಾಲಿಕವಾಗಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ