Share this news

ಕುಂದಾಪುರ : ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸೋಮವಾರ ಸಂಜೆ 4.30ರ ಹೊತ್ತಿಗೆ ಬೈಕ್‌ಗೆ ಗ್ಯಾಸ್‌ ಸಿಲಿಂಡರ್‌ ಸಾಗಾಟದ ಟಾಟಾ ಏಸ್‌ ವಾಹನ ಢಿಕ್ಕಿಯಾಗಿ ಬೈಕ್‌ ಚಲಾಯಿಸುತ್ತಿದ್ದ ಕಾರು ರೇಸ್‌ ಚಾಂಪಿಯನ್‌ ರಂಜಿತ್‌ ಬಲ್ಲಾಳ್‌ (59) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ರಂಜಿತ್‌ ಬಲ್ಲಾಳ್‌ ಮಂಗಳೂರು ಮೂಲದ ಕೆ.ಬಿ. ಯುವರಾಜ ಬಲ್ಲಾಳ್‌ ಅವರ ಪುತ್ರ. ಇವರು ಕುಟುಂಬಸ್ಥರೊಂದಿಗೆ 3 ದಿನಗಳ ಹಿಂದೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ರಂಜಿತ್‌ ಅವರು ಬೈಕ್‌ನಲ್ಲಿ ಬರುತ್ತಿದ್ದರೆ, ಹಿಂದಿನಿಂದ ಮನೆಯವರೆಲ್ಲ ಕಾರಿನಲ್ಲಿ ಬರುತ್ತಿದ್ದರು. ಅರಾಟೆ ಸೇತುವೆಗಿಂತ ತುಸು ಹಿಂದೆ ಒಂದು ಸೇತುವೆಯಲ್ಲಿ ಸಂಚಾರ ನಿಷೇಧಿಸಿದ್ದರಿಂದ ಡೈವರ್ಶನ್‌ ನೀಡಿದ್ದು, ಅಲ್ಲಿ ಟಾಟಾ ಏಸ್‌ ಚಾಲಕ ಏಕಾಏಕಿ ನಿಧಾನ ಮಾಡಿದ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್‌ ಟಾಟಾ ಏಸ್‌ ವಾಹನಕ್ಕೆ ಢಿಕ್ಕಿಯಾಯಿತು. ಪರಿಣಾಮ ಬೈಕ್‌ ಸವಾರ ರಂಜಿತ್‌ ಬಲ್ಲಾಳ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಗಂಗೊಳ್ಳಿಯ 24×7 ಆ್ಯಂಬುಲೆನ್ಸ್‌ನ ಇಬ್ರಾಹಿಂ ಹಾಗೂ ಅಬ್ರಾರ್‌ ಗಂಗೊಳ್ಳಿ ಮೃತದೇಹ ಆಸ್ಪತ್ರೆಗೆ ರವಾನಿಸಲು ಸಹಕರಿಸಿದರು. ಘಟನ ಸ್ಥಳಕ್ಕೆ ಗಂಗೊಳ್ಳಿ ಎಸ್‌ಐ ಹರೀಶ್‌ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Leave a Reply

Your email address will not be published. Required fields are marked *