ಬೆಂಗಳೂರು,ಅ. 18: ಪ್ರೇಯಸಿ ಜೊತೆ ಬೆಂಗಳೂರಿನ ಲಾಡ್ಜ್ ನಲ್ಲಿ ತಂಗಿದ್ದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರ್ಯಾಂಡ್ ಚಾಯ್ಸ್ ಎನ್ನುವ ಲಾಡ್ಜ್ ನಲ್ಲಿ ಪುತ್ತೂರು ಮೂಲದ ತಕ್ಷಿತ್(20) 8 ದಿನಗಳ ಹಿಂದೆ ತನ್ನ ಪ್ರೇಯಸಿ ಜೊತೆಗೆ ಬಂದು ರೂಂ ಮಾಡಿದ್ದ. ಆದರೆ ನಿನ್ನೆ (ಅಕ್ಟೋಬರ್ 17) ಲಾಡ್ಜ್ ನ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಪುತ್ತೂರಿನಿಂದ ಬಂದಿದ್ದ ಯುವಕ ತಕ್ಷಿತ್ ವಿರಾಜಪೇಟೆಯ ರಕ್ಷಿತಾ ಎನ್ನುವ ಯುವತಿ ಜೊತೆ ಲಾಡ್ಜ್ ಮಾಡಿಕೊಂಡಿದ್ದ. ಯುವಕನ ಸಾವಿಗೂ ಮುನ್ನ ಯುವತಿ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾಳೆ ಎನ್ನಲಾಗಿದೆ.
ಪ್ರೇಮಿಗಳು ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿ ಒಟ್ಟಿಗೆ ಊಟ ಮಾಡಿದ್ದರು. ನಂತರ ಇಬ್ಬರಿಗೆ ಫುಡ್ ಪಾಯ್ಸನ್ ಆಗಿ ಮಾತ್ರೆಗಳನ್ನು ತಿಂದಿದ್ದರು. ಸ್ವಲ್ಪ ಸುಧಾರಿಸಿಕೊಂಡ ಬಳಿಕ ರಕ್ಷಿತಾ ಲಾಡ್ಜ್ ನಿಂದ ಹೊರಗಡೆ ಹೋಗಿದ್ದಾರೆ. ಆದರೆ ರೂಮಿನಲ್ಲಿದ್ದ ಯುವಕ ತಕ್ಷಿತ್ ಮಾತ್ರ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.