ಹೆಬ್ರಿ:ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಬಸ್ ಚಾಲಕ ಪ್ರಯಾಣಿಕರಿದ್ದ ಬಸ್ಸನ್ನೇ ಆಸ್ಪತ್ರೆಗೆ ಒಯ್ದು ಯುವತಿಯ ಜೀವ ಉಳಿಸಿ ಮಾನವೀಯತೆ ಮರೆದ ಪ್ರಸಂಗ ಹೆಬ್ರಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುರಕ್ಷಾ ಎಂಬವರು ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಯುವತಿ. ಸುರಕ್ಷಾ ಮೇಗರವಳ್ಳಿಯಲ್ಲಿ ಬಸ್ ಏರಿ ಹೆಬ್ರಿಗೆ ಟಿಕೆಟ್ ಪಡೆದಿದ್ದರು. ಬಸ್ಸಿನಲ್ಲಿ ಬರುತ್ತಿದ್ದಾಗ ಆಗುಂಬೆ ಘಾಟಿಯಲ್ಲಿ ಸುರಕ್ಷಾ ಏಕಾಎಕಿ ತೀವ್ರ ಅಸ್ವಸ್ಥಗೊಂಡಾಗ ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋದಾಗ, ಸುರಕ್ಷಾ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅಲ್ಲಿಂದ ನೇರವಾಗಿ ಚಾಲಕ ತಾರೇಶ್ ಪ್ರಯಾಣಿಕರ ಸಹಕಾರದೊಂದಿಗೆ ಬಸ್ಸನ್ನು ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಒಯ್ದು ಸುರಕ್ಷಾ ಅವರನ್ನು ದಾಖಲು ಮಾಡಲಾಗಿದೆ.
ಈ ಘಟನೆಯಿಂದ ಬದುಕುಳಿದ ಸುರಕ್ಷಾ ಅವರ ತಾಯಿ ಪ್ರಕ್ರಿಯಿಸಿದ್ದು,
ದೇವರ ರೂಪದಲ್ಲಿ ಬಂದು ನನ್ನ ಮಗಳನ್ನು ಕಾಪಾಡಿದ ಸಿಬ್ಬಂದಿಗಳಿಗೆ ನನ್ನ ಮನಪೂರ್ವಕ ಕೃತಜ್ಞತೆ. ಉಸಿರಿರುವವರೆಗೆ ಅವರನ್ನು ನೆನಪು ಮಾಡುತ್ತೇನೆ. ಮುನಿಯಾಲಿನಲ್ಲಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ನನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಘಟನೆ ಕುರಿತು ಸ್ಮರಿಸಿಕೊಂಡರು.