ಬೆಂಗಳೂರು: ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಅವರು ಇಂದು ನಿಧನರಾಗಿದ್ದಾರೆ. ಅವರನ್ನು ವಯೋಸಹಜ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ನಿಧನರಾಗಿದ್ದಾರೆ. ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್ ರ ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ.
ಜಯನಗರದ ಅಪೋಲೊ ಆಸ್ಪತ್ರೆಗೆ ಸುದೀಪ್ ಅವರ ತಾಯಿಯನ್ನು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 07:04 ಕ್ಕೆ ಸುದೀಪ್ ರ ತಾಯಿ ನಿಧನ ರಾಗಿದ್ದಾರೆ. ತಾಯಿಯ ಅನಾರೋಗ್ಯದ ಕಾರಣಕ್ಕೆ ನಿನ್ನೆ ಬಿಗ್ ಬಾಸ್ ಶೂಟಿಂಗ್ ಅನ್ನು ಬೇಗನೆ ಮುಗಿಸಿ ಹೋಗಿದ್ದಾರೆ ಸುದೀಪ್. ನಿನ್ನೆಯ ವಾರದ ಪಂಚಾಯಿತಿ, ಸಾಮಾನ್ಯಕ್ಕಿಂತಲೂ ಕಡಿಮೆ ಅವಧಿಗೆ ಪ್ರಸಾರವಾಗಿತ್ತು.
ಸುದೀಪ್ ಅವರ ತಾಯಿ ಮಂಗಳೂರು ಮೂಲದವರು, ವಿಕ್ರಾಂತ್ ರೋಣ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದ ಸುದೀಪ್, ನನ್ನ ತಾಯಿ ಮಂಗಳೂರು ಮೂಲದವರು, ಅವರ ಮಾತೃಭಾಷೆ ತುಳು. ನನಗೆ ಆ ಭಾಷೆ ಬಹಳ ಇಷ್ಟ. ನಾನು ಸಾಕಷ್ಟು ಕೇಳಿಸಿಕೊಂಡಿದ್ದೇನೆ ಆದರೆ ನನಗೆ ಮಾತನಾಡಲು ಬರುವುದಿಲ್ಲ ಎಂದಿದ್ದರು. ಸುದೀಪ್‌ರ ತಾಯಿ ಸರೋಜಾ ಆಗಾಗ್ಗೆ ಕೆಲವು ಸಿನಿಮಾ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಸುದೀಪ್ ರ ಸಹೋದರಿ ಮಗನ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದ ಸರೋಜಾ ಅವರು ವೇದಿಕೆ ಮೇಲೆ ಮಗ, ಮೊಮ್ಮಗನನ್ನು ಕಂಡು ತುಸು ಭಾವುಕರಾಗಿದ್ದರು.