Share this news

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಪೈಪ್ ಲೈನ್ ಅಳವಡಿಸಲು ರಸ್ತೆ ಅಗೆದ ಪರಿಣಾಮ ರಸ್ತೆಗಳು ಹದಗೆಟ್ಟಿದ್ದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿಪಡಿಸುವಂತೆ ಒತ್ತಾಯಿಸಿ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿದರು.
ಪುರಸಭಾ ಸದಸ್ಯ ಯೋಗೀಶ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಮುಖಂಡ  ಶುಭದ ರಾವ್ ಮಾತನಾಡಿ, ಅನಂತಶಯನ ತೆಳ್ಳಾರು ರಸ್ತೆ, ಪೆರ್ವಾಜೆ ಎಲ್‌ಐಸಿ ರಸ್ತೆ, ಆನೆಕೆರೆ ರಸ್ತೆ ಸೇರಿದಂತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷದ ಸದಸ್ಯರನ್ನು ಸೇರಿಸಿಕೊಂಡು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು
.ಈ ನಡುವೆ ನೀರು ಸರಬರಾಜು ಮಂಡಳಿಯ ಸಹಾಯಕ ಇಂಜಿನಿಯರ್ ರಕ್ಷಿತ್ ಕಾಮಗಾರಿ ಪ್ರಗತಿಯ ಕುರಿತು ಮಾಹಿತಿ ನೀಡಿ ಕಾಮಗಾರಿ ನಡೆಸಲು ಮೇಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ,ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು. ಇತ್ತ ವಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಆಡಳಿತ ಪಕ್ಷ ಬಿಜೆಪಿ ಸದಸ್ಯ ಪ್ರದೀಪ್ ರಾಣೆ ಮಾತನಾಡಿ, ಕಳೆದ ನವೆಂಬರ್ ತಿಂಗಳಲ್ಲಿ ಆರಂಭವಾಗಬೇಕಾದ ಕಾಮಗಾರಿ ಮೇ ತಿಂಗಳಲ್ಲಿ ಆರಂಭಗೊಂಡಿದೆ. ಮಳೆಗಾಲದಲ್ಲಿ ಏಕಾಎಕಿ ಕಾಮಗಾರಿ ನಡೆಸುವ ಅನಿವಾರ್ಯ ಏನಿತ್ತು,ಈ ವಿಳಂಬಕ್ಕೆ ಕಾರಣ ಯಾರು ಎಂದು ಪ್ರಶ್ನಿಸಿದರು
 ಇದಕ್ಕೆ ಕೆಂಡಾಮಂಡಲವಾದ ಧರಣಿನಿರತ ಪ್ರತಿಪಕ್ಷದ ಸದಸ್ಯರು ನಮಗೆ ಅಧ್ಯಕ್ಷರು ಸ್ಪಷ್ಟನೆ ಕೊಡಬೇಕು, ನಿಮ್ಮ ಸಮಜಾಯಿಷಿಯ ಅಗತ್ಯವಿಲ್ಲ ನೀವು ಸುಮ್ಮನಿರಿ ಎಂದಾಗ ಆಡಳಿತ ಪಕ್ಷದ ಸದಸ್ಯರು ಪ್ರದೀಪ್ ರಾಣೆ ಬೆಂಬಲಕ್ಕೆ ನಿಂತಾಗ, ನಮ್ಮ ಬೇಡಿಕೆಗೆ ಅಧ್ಯಕ್ಷರು ಉತ್ತರಿಸಬೇಕು. ಅಧಿಕಾರಿಗಳಿಂದ ಮಾಹಿತಿ ಕೊಡಿಸಬೇಕು.ಆಡಳಿತ ಪಕ್ಷದ ಸದಸ್ಯರಿಗೆ ಮೂಗು ತೂರಿಸುವ ಅಧಿಕಾರ ಇಲ್ಲ ಎಂದು ಶುಭದರಾವ್ ಆಕ್ಷೇಪಿಸಿದರು.
ಈ ನಡುವೆ ಸದಸ್ಯೆ ಶೋಭಾ ದೇವಾಡಿಗ ಮಾತನಾಡಿ, ಜನರ ಸಮಸ್ಯೆಯ ಬಗ್ಗೆ ಚರ್ಚಿಸಲು ಆಡಳಿತ ಮತ್ತು ಪ್ರತಿಪಕ್ಷ ಎಂಬ ಬೇಧ ಭಾವ ಇಲ್ಲವೆಂದಾಗ ಅವರೊಂದಿಗೆ ಸುಮಾ ಕೇಶವ್, ನೀತಾ ಆಚಾರ್ಯ, ಮಮತಾ, ಭಾರತಿ ಅಮೀನ್, ಮೀನಾಕ್ಷಿ ಗಂಗಾಧರ್, ಪಲ್ಲವಿ ಮುಂತಾದವರು ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಕೆರಳಿದ ವಿಪಕ್ಷ ಸದಸ್ಯರು ಏಕಾಎಕಿ ಧರಣಿ ಕೈಬಿಟ್ಟು ಸಭಾತ್ಯಾಗ ಮಾಡಿದರು. ವಿಚಾರದಲ್ಲಿ ಮಾತಿನ ಚಕಾಮಕಿ ನಡೆದಿದ್ದು, ಪ್ರತಿಪಕ್ಷದ ಸದಸ್ಯರು ಧರಣಿ ನಿಲ್ಲಿಸಿ ಸಭಾತ್ಯಾಗ ನಡೆಸಿದರು. ಅಧ್ಯಕ್ಷ ಯೋಗೀಶ್ ದೇವಾಡಿಗ ಸದನವನ್ನು ಹದಿನೈದು ನಿಮಿಷಗಳ ಕಾಲ ಮುಂದೂಡಿದರು.
ಬಳಿಕ ಮತ್ತೆ ಆರಂಭಗೊಂಡ ಸಭೆಯಲ್ಲಿ ಜಲಮಂಡಳಿ ಅಧಿಕಾರಿ ರಕ್ಷಿತ್ ಮತ್ತೆ ಕಾಮಗಾರಿ ಕುರಿತು ವಿವರಣೆ ನೀಡಲು ಮುಂದಾದಾಗ ಪ್ರತಿಪಕ್ಷದ ಸದಸ್ಯ ಹರೀಶ್ ದೇವಾಡಿಗ, ಪ್ರತಿಮಾ ರಾಣೆ, ಶಿವಾಜಿ ರಾವ್ ಮತ್ತಿತರರು ತೀವ್ರ ತರಾಟೆಗೆ ತೆಗೆದುಕೊಂಡರು. ಜಲಮಂಡಳಿ ಅಧಿಕಾರಿ ರಕ್ಷಿತ್ ಶೆಟ್ಟಿ ಮಾತನಾಡಿ, ಮಳೆಗಾಲಕ್ಕೆ ವೆಟ್‌ಮಿಕ್ಸ್ ಮೂಲಕ ರಸ್ತೆಯನ್ನು ಪ್ರತಿ ಹದಿನೈದು ದಿನಕ್ಕೊಮ್ಮೆ ಸರಿಪಡಿಸುತ್ತೇವೆ. ಮಳೆಗಾಲ ಮುಗಿದ ತಕ್ಷಣ ಕಾಂಕ್ರಿಟ್, ಡಾಮರೀಕರಣ ಅಥವಾ ಇಂಟರ್‌ಲಾಕ್ ಅಳವಡಿಕೆ ಮಾಡಲಾಗುವುದೆಂದು ಭರವಸೆ ನೀಡಿದರು. ಬಳಿಕ ವಿಪಕ್ಷ ಸದಸ್ಯರು ಧರಣಿ ಹಿಂಪಡೆದರು.
ಬಳಿಕ ಕಲಾಪ ಮುಂದುವರಿದಾಗ ವಿಪಕ್ಷ ಸದಸ್ಯ ವಿವೇಕಾನಂದ ಶೆಣೈ ಮಾತನಾಡಿ, ಪ್ರತೀ
 ಶೌಚಾಲಯ ದುರಸ್ತಿಗೆ 60 ಸಾವಿರ ರೂ. ವ್ಯಯಿಸಲಾಗಿದೆ, ಸುಣ್ಣ ಬಣ್ಣಕ್ಕೆ ಇಷ್ಟು ಖರ್ಚಾಗುತ್ತದೆಯೇ ಎಂದು ಪ್ರಶ್ನಿಸಿದರು. ಪ್ರತಿಮಾ ರಾಣೆ ಮಾತನಾಡಿ, ಮಾರುಕಟ್ಟೆ ಮಳಿಗೆಗಳಲ್ಲಿ ಹಗಲು ಕೂಡ ವಿದ್ಯುತ್ ದೀಪ ಉರಿಯುತ್ತಿದ್ದು ಟೆಂಡರ್ ಪಡೆದವರಿಗೆ ಹೊಣೆಗಾರಿಕೆ ಇಲ್ಲವೇ, ವಿದ್ಯುತ್ ಪೋಲಾಗುವುದರಿಂದ ಪುರಸಭೆಗೆ ನಷ್ಟವಾಗುತ್ತದೆ ಎಂದು ಸಭೆಯ ಗಮನ ಸೆಳೆದರು . ಸುಮಾ ಕೇಶವ್ ಮಾತನಾಡಿ, ಬಸ್ಸು ನಿಲ್ದಾಣದ ಬಳಿ ಹೈಮಾಸ್ಟ್ ದೀಪಕ್ಕೆ ಅಪಘಾತವೆಸಗಿದ ಬಸ್ಸು ಮಾಲಿಕರಿಗೆ ನೋಟೀಸ್ ಜಾರಿ ಮಾಡಿ ದಂಡ ವಸೂಲಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಳಿನಿ ಆಚಾರ್ಯ ಮಾತನಾಡಿ, ಕಾಬೆಟ್ಟು ಪಾರ್ಕ್‌ಗೆ ವ್ಯಾಯಾಮದ ಸಲಕರಣೆಗಳನ್ನು ಒದಗಿಸುವಂತೆ ಬೇಡಿಕೆ ಸಲ್ಲಿಸಿದರು. ಹರೀಶ್ ದೇವಾಡಿಗ, ರೆಹಮತ್ ಎನ್.ಶೇಖ್, ಸೋಮನಾಥ ನಾಯ್ಕ್, ಅಶ್ಪಕ್ ಅಹ್ಮದ್, ಪ್ರತಿಮಾ ರಾಣೆ ಮುಂತಾದವರು ಅಮೃತಯೋಜನೆಯಡಿ ತಮ್ಮ ವಾರ್ಡುಗಳಿಗಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಪುರಸಭೆ ಅಧ್ಯಕ್ಷೆ ಯೋಗೀಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಪುರಸಭೆಯ ಮ್ಯಾನೇಜರ್ ಉದಯ ಕುಮಾರ್ ಉಪಸ್ಥಿತರಿದ್ದರು.

 

 

 

 

 

 

 

Leave a Reply

Your email address will not be published. Required fields are marked *