Share this news

ಅಥಣಿ: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಉತ್ತರ ಕರ್ನಾಟಕ ಭಾಗದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.
ಅವರು ಅಥಣಿಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾಗಲಿದ್ದು, ಆ ಅದೃಷ್ಟ ನನಗೂ ಏಕೆ ಕೂಡಿ ಬರಬಾರದು ಎಂದರು. ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಲಿಂಗಾಯತ ಬಂಧುಗಳಿಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲಾಗುವುದು ಎಂದರು.
ಕಾಂಗ್ರೆಸ್‌ನವರು ಪ್ರತಿ ಚುನಾವಣೆಯಲ್ಲಿ ಜಾತಿ ವಿಷ ಬೀಜ ಬಿತ್ತಿ ಲಾಭ ಮಾಡಿಕೊಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಒಂದೇ ಧರ್ಮದ ಪರವಾದ ಅನೇಕ ಅಂಶಗಳಿವೆ ಎಂದು ದೂರಿದರು.

ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಅಂದಿನ ಪ್ರಧಾನಿ ನೆಹರೂ ಜಮ್ಮು ಕಾಶ್ಮೀರಕ್ಕೆ 370ನೇ ವಿಧಿ ಜಾರಿಗೆ ತಂದರು. ಆಗ ಡಾ.ಬಾಬಾಸಾಹೇಬ್‌ ಅಂಬೇಡ್ಕರ್ ವಿರೋಧಿಸಿದ್ದರು. ಆದರೂ ನೆಹರೂ ಬಲವಂತವಾಗಿ ಈ ವಿಧಿಯನ್ನು ಜಾರಿಗೊಳಿಸಿದರು. ಇದನ್ನು ವಿರೋಧಿಸಿ ಪಂಡಿತ್.ಶ್ಯಾಮಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು. ಈಗ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದರು. ಇಂತಹ ಪ್ರಧಾನಿಯನ್ನು ನಾವು ಪುನರಾಯ್ಕೆ ಮಾಡಿ ಭಾರತ ಮತ್ತು ಸನಾತನ ಧರ್ಮವನ್ನು ಉಳಿಸಬೇಕಿದೆ ಎಂದು ತಿಳಿಸಿದರು.

ಚಿಕ್ಕೋಡಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾಸಾಹೇಬ್‌ ಜೊಲ್ಲೆ ಮಾತನಾಡಿ, ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಿರುವೆ. ಪಿಎಂಜಿಎಸ್‌ವೈ ಯೋಜನೆಯಡಿ ₹25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿರುವೆ. ಅಥಣಿ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ₹4,480 ಕೋಟಿ ಅನುದಾನ ಮಂಜೂರು ಮಾಡಿಸಿರುವೆ. ನನ್ನ ಧರ್ಮ ಪತ್ನಿ ಶಶಿಕಲಾ ಜೊಲ್ಲೆ ರಾಜ್ಯ ಸರ್ಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ವೇಳೆ ಅಥಣಿ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.

 

 

 

 

 

 

 

Leave a Reply

Your email address will not be published. Required fields are marked *