ಕಾರ್ಕಳ: ಬೈಲೂರಿನ ಉಮಿಕ್ಕಲ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್ ವಿಚಾರವಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿರುವುದು ಖುಷಿ ತಂದಿದೆ.ಆದರೆ ಥೀಂ ಪಾರ್ಕ್ ಅಭಿವೃದ್ದಿಗೆ ತಡೆಯೊಡ್ಡಿ, ಸರಿಯಾದ ರೀತಿ ತನಿಖೆ ನಡೆಸದೇ, ಬಾಕಿ ಕಾಮಗಾರಿ ಮುಂದುವರೆಸಲು ಹಣ ನೀಡದ
ಕಾಂಗ್ರೆಸ್ ಸರಕಾರದ ವಿರುದ್ಧ ಈ ಪ್ರತಿಭಟನೆಯೇ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಡೆಸುವ ಈ ಪ್ರತಿಭಟನೆಯಿಂದ ರಾಜ್ಯ ಸರಕಾರ ಹಾಗೂ ಸಿ.ಎಂ ಸಿದ್ಧರಾಮಯ್ಯರವರ ಮೇಲೆ ಒತ್ತಡ ತಂದು ಆದಷ್ಟು ಶೀಘ್ರವಾಗಿ ಬಾಕಿ ಹಣ ಬಿಡುಗಡೆಯಾಗಲಿದೆ ಎಂಬ ವಿಶ್ವಾಸ ನಮ್ಮದು ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಕಾಂಗ್ರೆಸ್ ಪ್ರತಿಭಟನೆಯನ್ನು ಲೇವಡಿ ಮಾಡಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಕುರಿತು ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರಿಗೆ ತಮ್ಮದೇ ಸರಕಾರ ಇದ್ದರೂ ಕಳೆದ ಒಂದುವರೆ ವರ್ಷದಲ್ಲಿ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗ ಪಡಿಸಲು ಸಾಧ್ಯವಾಗಿಲ್ಲ. ಕಾಮಗಾರಿಯಲ್ಲಿ ಲೋಪವಾದಲ್ಲಿ ತಮ್ಮದೇ ಸರಕಾರ ಅಧಿಕಾರದಲ್ಲಿರುವಾಗ ಯಾವುದೆ ತನಿಖೆ ಮೂಲಕವಾದರೂ ಬಹಿರಂಗ ಪಡಿಸಬೇಕಿತ್ತು.ಬಾಕಿ ಹಣ ಬಿಡುಗಡೆಗೊಳಿಸಿ ಉಳಿದ ಕೆಲಸವನ್ನು ಪೂರ್ಣಗೊಳಿಸುತ್ತಿಲ್ಲ. ನಿಮ್ಮ ಪ್ರತಿಭಟನೆ ಯಾರ ವಿರುದ್ದ ಎನ್ನುವುದೆ ನಮಗೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಕಾಮಾಗಾರಿ ಪೂರ್ಣಗೊಳಿಸಲು ನ್ಯಾಯಾಲಯ ಸೂಚನೆ ನೀಡಿದಾಗ ರಸ್ತೆಗೆ ಅಡ್ಡ ಮಣ್ಣು ರಾಶಿ ಹಾಕಿ ತಡೆದವರು ನೀವು, ನ್ಯಾಯಲಯ,ಒತ್ತಡ ಇನ್ನಿತರ ಹಲವು ರೀತಿಯಲ್ಲಿ ಕಾಮಗಾರಿಗೆ ತಡೆಯೊಡ್ಡಿದ್ದು ಯಾಕೆ? ಬಿಜೆಪಿ 6 ಕೋಟಿ ರೂಪಾಯಿ ಹಣ ಬಿಡುಗಡೆಗೊಳಿಸಿತ್ತು. 5 ಕೋಟಿ ರೂಪಾಯಿಗೆ ಅನುಮೋದನೆಯನ್ನು ನೀಡಿತ್ತು. ಅನುಮೋದನೆ ದೊರೆತ ಕೋಟಿಗಟ್ಟಲೆ ಹಣವನ್ನು ಎಲ್ಲಿ ನುಂಗಿ ನೀರು ಕುಡಿದಿದ್ದಿರಿ. ಸರಿಯಾದ ರೀತಿ ತನಿಖೆಯನ್ನು ನಡೆಸದೇ, ಬಾಕಿ ಮೊತ್ತವನ್ನು ನೀಡದೇ, ಪಾರ್ಕ್ ಅಭಿವೃದ್ದಿಗೆ ಅಡ್ಡಿ, ಆತಂಕಗಳನ್ನು ತಂದು ಪಾರ್ಕ್ ಕಾಮಗಾರಿಗೆ ತಡೆಯೊಡ್ಡಿದ ಕಾಂಗ್ರೆಸ್ಸಿಗರು ಇದೀಗ ತಮ್ಮ ನಾಟಕ ತಂಡವನ್ನು ರಾಜ್ಯ ರಾಜಧಾನಿಗೆ ಸ್ಥಳಾಂತರಿಸಿದೆ ಎಂದು ನವೀನ್ ನಾಯಕ್ ಕುಟುಕಿದ್ದಾರೆ