ಅಜೆಕಾರು: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಹೊಳೆ – ಅಂಡಾರು ರಸ್ತೆಯ ಕೊಂದಲ್ಕೆ ಎಂಬಲ್ಲಿ ಕಳ್ಳತನ ಮಾಡಿ 2 ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಪೊಲೀಸರು ಪಿಕಪ್ ಸಹಿತ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಅಜೆಕಾರು ಠಾಣಾ ಪಿಎಸ್ಐ ಮಹೇಶ್ ಟಿಎಂ ಅವರು ಸೆ.27 ರಂದು ರಾತ್ರಿ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ವ್ಯಕ್ತಿಯೊಬ್ಬರು ಕರೆ ಮಾಡಿ ಅಂಡಾರು- ಕಾಡುಹೊಳೆ ರಸ್ತೆಯಲ್ಲಿ ಹೆಬ್ರಿ ಕಡೆಗೆ ಮಾಂಸಕ್ಕಾಗಿ ದನ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು.
ಕೂಡಲೇ ಅಲರ್ಟ್ ಆದ ರ್ಪೊಲೀಸರು ಅಂಡಾರು ರಸ್ತೆಯ ಕೊಂದಲ್ಕೆ ಎಂಬಲ್ಲಿ ರಾತ್ರಿ 12.30 ರ ವೇಳೆಗೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಂಡಾರು ಕಡೆಯಿಂದ ಬಂದ ಒಂದು ಮಹೀಂದ್ರ ಪಿಕಪ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಆರೋಪಿಗಳು ಇಳಿದು ಪರಾರಿಯಾಗಲು ಯತ್ನಿಸಿದ್ದರು.
ಕೂಡಲೇ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಿಸಿದಾಗ ದನ ಸಾಗಾಟದ ವಿಚಾರ ಬಯಲಿಗೆ ಬಂದಿದೆ.
ಆರೋಪಿಗಳು ಅಂಡಾರು ಗರಡಿಯ ಬಳಿಯಿಂದ ಸುಮಾರು 4 ವರ್ಷ ಪ್ರಾಯದ ರೂ. 20,000 ಮೌಲ್ಯದ ಜೆರ್ಸಿ ದನ ಹಾಗೂ ಇನ್ನೊಂದು 4 ವರ್ಷ ಪ್ರಾಯದ ಮಿಶ್ರ ತಳಿಯ ರೂ.12,000 ಮೌಲ್ಯದ ಹಸುವನ್ನು ಕಳವುಗೈದು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದು, ಆರೋಪಿಗಳಾದ ಶಿವಮೊಗ್ಗ ಮೂಲದ ರಂಗನಾಥ ಹಾಗೂ ಶಿರ್ಲಾಲು ಪಡ್ಡಾಯಿಮಾರು ನಿವಾಸಿ ಸುಂದರ ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.