ಕಾರ್ಕಳ: ಹೆಬ್ರಿ ಕಡೆಯಿಂದ ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಅಜೆಕಾರು ಸಮೀಪದ ಗುಡ್ಡೆಯಂಗಡಿ ಓಟೆಹಳ್ಳ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 6 ಜನ ಗಾಯಗೊಂಡ ಘಟನೆ ಭಾನುವಾರ ಮುಂಜಾನೆ 5.30ಕ್ಕೆ ಸಂಭವಿಸಿದೆ.
ಹುಬ್ಬಳ್ಳಿ ಮೂಲದವರಾದ ಮಂಜುನಾಥ್ ಗೌಡ (28), ಆತ್ಮಾನಂದ (24) ಹನುಮಂತ್ ಗೌಡ (23) ಹಾಲಪ್ಪ ಗೌಡ (24) ವೀರಭದ್ರಗೌಡ (28) ಬಸನಗೌಡ( 27) ಎಂಬವರು ಗಾಯಗೊಂಡವರು ಎಂದು ತಿಳಿದುಬಂದಿದೆ.
ಹೆಬ್ರಿ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಸೇತುವೆಯ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಸೇತುವೆಯ ತಡಗೋಡೆಗೆ ಅಪ್ಪಳಿಸಿದೆ. ಈ ಭೀಕರ ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು,ಅಪಘಾತದ ರಭಸಕ್ಕೆ ಕಾರಿನ ಏರ್ ಬ್ಯಾಗ್ ಗಳು ತೆರೆದುಕೊಂಡ ಕಾರಣದಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಜೆಕಾರು ಪೊಲೀಸರು ಅಪಘಾತದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ
ಭಾರತ ಸರ್ಕಾರದ ಬೋರ್ಡ್ ಹಾಕಿ ದುರುಪಯೋಗ
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು GOVT OF INDIA ಎಂಬ ನಾಮಫಲಕವನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಅಳವಡಿಸಿ ಪ್ರಯಾಣಿಸುತ್ತಿದ್ದರು. ಭಾರತ ಸರ್ಕಾರದ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಪೊಲೀಸರು ಕ್ರಮಕೈಗೊಳ್ಳಬೇಕಿದೆ.