ಕಾರ್ಕಳ: ಅಜೆಕಾರು ಮತಗಟ್ಟೆ ಸಂಖ್ಯೆ 48 ರಲ್ಲಿ ವಯೋವೃದ್ದ ಮಹಿಳೆಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೇ ಮತ ಚಲಾಯಿಸಲಾಗದೇ ಪರದಾಡಿದ ಪ್ರಸಂಗ ನಡೆಯಿತು.
ಮರ್ಣೆ ಗ್ರಾಮದ ನೆರೋಳ್’ಮಾರ್ ನಿವಾಸಿ ಕಮಲಾ ಪೂಜಾರಿ ಅಜೆಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 48 ರಲ್ಲಿ ಮತದಾನ ಮಾಡಲು ಬಂದಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದರು. ಆದರೆ ಈ ಬಾರಿ ಮತದಾರರ ಪಟ್ಟಿಯಲ್ಲಿ ಕಮಲಾ ಅವರ ಹೆಸರು ನಾಪತ್ತೆಯಾಗಿದೆ.
ಬಿಎಲ್ಓ ಎಡವಟ್ಟು:
ಇತ್ತ ಕಮಲ ಅವರು ಮತಚಲಾಯಿಸಲು ಸರತಿ ಸಾಲಿನಲ್ಲಿ ನಿಂತರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದೇ ಮತ ಚಲಾಯಿಸಲು ಪರದಾಡಿದ್ದಾರೆ. ಇತ್ತ ಬಿಎಲ್ಓ ಅಮ್ಮಣಿ ಎಂಬವರು ಕಮಲ ಅವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದ ಹಿನ್ನೆಲೆಯಲ್ಲಿ ಮತದಾರರ ಚೀಟಿ ನೀಡಿಲ್ಲ. ಆದರೆ ಒಂದು ವಾರ ಅವಕಾಶವಿದ್ದರೂ ಬಿಎಲ್ಓ ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಾರದೇ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.
ಇದರಿಂದ ಕಮಲಾ ಅವರು ಪ್ರಜಾಪ್ರಭುತ್ವದ ಹಕ್ಕು ಚಲಾವಣೆಯ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಮತದಾನದಿಂದ ವಂಚಿತರಾಗುವುದು ಸಲ್ಲದು: ನರಸಪ್ಪ ,ಕಾರ್ಕಳ ತಹಶೀಲ್ದಾರ್
ಕಮಲಾ ಪೂಜಾರಿ ಅವರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದ ವಿಚಾರವನ್ನು ಪತ್ರಕರ್ತರು ತಹಶಿಲ್ದಾರ್ ನರಸಪ್ಪ ಅವರ ಗಮನಕ್ಕೆ ತಂದಾಗ, ಮತದಾನದಿಂದ ಯಾರು ವಂಚಿರಾಗಬಾರದು, ಚುನಾವಣಾ ಆಯೋಗದ ವೆಬ್’ಸೈಟ್ ನಲ್ಲಿ ಪರಿಶೀಲಿಸಿ ಪಟ್ಟಿಯಲ್ಲಿ ಹೆಸರು ಖಾತರಿಪಡಿಸಿ ಮತಚಲಾಯಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಸಿಬ್ಬಂದಿಗಳು ಮಾಡಿದ ಎಡವಟ್ಟಿಗೆ ಕಮಲಾ ಪೂಜಾರಿ ಅವರು ಮತದಾನದಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ.