
ಕಾರ್ಕಳ, ಏ.12: ಜ್ಞಾನ ಎನ್ನುವುದು ಅಮೃತವಿದ್ದಂತೆ. ಆಧ್ಯಾತ್ಮಿಕದ ಜೊತೆಗೆ ಸಾಮಾಜಿಕವಾಗಿ ಎತ್ತರಕ್ಕೇರಿದಾಗ ನಮ್ಮ ಜೀವನ ಪಾವನವಾಗುತ್ತದೆ,ಇದುವೇ ಸನಾತನ ಧರ್ಮದ ಸಾರ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಪಾದರು ಹೇಳಿದರು.
ಅವರು ಅಜೆಕಾರು ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾಪೂರ್ವಕ ಬ್ರಹ್ಮ ಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಶಿಕ್ಷಣದ ಜ್ಞಾನದ ಬೆಳಕು ನೀಡಿದರೆ ದೇವಸ್ಥಾನವು ನಮ್ಮ ಅಂತರಂಗದ ಜ್ಯೋತಿ ಬೆಳಗುತ್ತದೆ. ತನ್ನ ಹುಟ್ಟೂರಿನಲ್ಲಿ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಜ್ಞಾನ ಪಸರಿಸುವ ಸುಧಾಕರ ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಸುನಿಲ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿದರು.
ವೇದಿಕೆಯಲ್ಲಿ ಡಾ.ಕೆ.ಸಿ ನಾಯ್ಕ್,ಮುಂಬಯಿ ಉದ್ಯಮಿ ಶಿವರಾಮ ಶೆಟ್ಟಿ ಅಜೆಕಾರು, ಶಶಿಧರ ಶೆಟ್ಟಿ ಬರೋಡ, ಮಹೇಶ್ ಶೆಟ್ಟಿ ಕುಡುಪುಲಾಜೆ,ಜ್ಞಾನಾಮೃತ ಕಾಲೇಜಿನ ಅಧ್ಯಕ್ಷ ಎಂ.ಜಿ ಗೌಡ್ ಬಳ್ಳಾರಿ, ಜಗದೀಶ್ ಕಾರಂತ, ಕಮಲಾಕ್ಷ ನಾಯಕ್, ಡಾ.ಸಂತೋಷ ಕುಮಾರ್ ಶೆಟ್ಟಿ,ಡಾ.ಎಸ್.ಎಂ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಎದೆಹಾಲು ಕೊಟ್ಟ ತಾಯಿಯನ್ನು, ಮಕ್ಕಳಿಗಾಗಿ ದುಡಿಯುವ ತಂದೆಯನ್ನು ಮರೆಯಬೇಡಿ, ವಿದ್ಯೆ ಕಲಿಸಿದ ಗುರುವನ್ನು,ಜೊತೆಗೆ ನಮ್ಮ ದೇಶವನ್ನು ಎಂದಿಗೂ ಮರೆಯಬೇಡಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
















.
.
.
.
.
.
.
.
.
.
