ಕಾರ್ಕಳ: ಮೊಬೈಲ್ ಬಳಕೆಯ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಪುಸ್ತಕ ಮನೆ ಕನ್ನಡ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಯುವ ಬರಹಗಾರರ ಸಮ್ಮೇಳನ ಬಹಳ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು,ಯುವ ಸಾಹಿತಿಗಳನ್ನು ಪರಿಚಯಿಸುವ ಕೆಲಸವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ವಿಕಾಸ ಸೇವಾ ಸಂಸ್ಥೆ ಕಾರ್ಕಳ , ಕ್ರಿಯೇಟಿವ್ ಪುಸ್ತಕ ಮನೆ ಸಹಯೋಗದೊಂದಿಗೆ ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ಅ.30ರಂದು ನಡೆದ ಯವ ಬರಹಗಾರರ ಸಮ್ಮೇಳನ ಅಕ್ಷರಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಕಳ ತಾಲೂಕಿನಲ್ಲಿ ಯುವ ಬರಹಗಾರರ ಸಮ್ಮೇಳನ ಪ್ರತೀವರ್ಷ ನಡೆಯಬೇಕು.ಸಾಹಿತ್ಯದ ಆಸಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಶಿಕ್ಷಣವೆಂದರೆ ಕೇವಲ ಓದು,ಪರೀಕ್ಷೆ, ಅಂಕಗಳಿಗೆ ಮಾತ್ರ ಸೀಮಿತವಾಗದೇ ನಮ್ಮೊಳಗಿನ ಸಾಹಿತ್ಯದ ಪ್ರತಿಭೆಗಳ ಅನಾವರಣವಾಗಬೇಕು ಅದಕ್ಕಾಗಿ ಯುವ ಬರಹಗಾರರ ಸಮ್ಮೇಳನ ವೇದಿಕೆಯಾಗಲಿದೆ ಎಂದರು.
ಸಮಾರಂಭದಲ್ಲಿ ಚಿತ್ರರಂಗ ಹಿರಿಯ ನಿರ್ದೇಶಕ ಎಸ್ ಎನ್ ಸೇತುರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಓದು ವಿದ್ಯೆಯಾಗಬೇಕಾದರೆ ಉತ್ತಮ ಕೃತಿಗಳು ಬಿಡುಗಡೆಯಾಗಬೇಕು, ಈ ನಿಟ್ಟಿನಲ್ಲಿ ಯುವ ಜನತೆಗೆ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಕ.ಸಾ.ಪ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ವಿದ್ವಾನ್ ಗಣಪತಿ ಭಟ್, ಗಣನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಾದ ಎಸ್.ಎಲ್ ಅಶ್ವಥ್ ಸ್ವಾಗತಿಸಿ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ, ಪುಸ್ತಕ ಮನೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕೃತಿಗಳು ಮಾರಾಟವಾಗಿದ್ದು, ಮೊಬೈಲ್ ಯುಗದಲ್ಲಿಯೂ ಓದುಗರ ಸಂಖ್ಯೆ ಜಾಸ್ತಿಯಾಗಿದ್ದು ಕನ್ನಡ ಸಾಹಿತ್ಯದ ಪಾಲಿಗೆ ಆಶಾದಾಯಕ ಬೆಳವಣಿಗೆ ಎಂದರು. ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಐವರು ಸಾಹಿತಿಗಳ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.ಸಭಾಕಾರ್ಯಕ್ರಮದ ಬಳಿಕ ಸಾಹಿತಿಗಳಿಂದ ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮ ನಡೆಯಿತು.