ಬೆಳ್ತಂಗಡಿ ಸೆ.03: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಹಣಕಾಸು ವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ನೂರಾರು ಶವ ಹೂಳಲಾಗಿದೆ’ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಆರೋಪ ಮಾಡಿ ಸಂಚಲನ ಸೃಷ್ಟಿಸಿದ್ದ ‘ಬುರುಡೆ ಪ್ರಕರಣ’ಕ್ಕೆ ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕೃತವಾಗಿ ಪ್ರವೇಶಿಸಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲು ವಿದೇಶದಿಂದ ಹಣ ಸಂದಾಯವಾಗಿತ್ತು ಎನ್ನುವ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿದೆ.
ವಿದೇಶಿ NGO ಗಳಿಂದ ಹಣ ಫಂಡಿಂಗ್ ಆಗಿದೆಯಾ ಎಂಬ ಅನುಮಾನ ಹಿನ್ನೆಲೆಯಲ್ಲಿ ಒಡನಾಡಿ ಹಾಗೂ ಸಂವಾದ ಸಂಸ್ಥೆಗಳ ಅಕೌಂಟ್ ಗಳ ಬಗ್ಗೆ ಇಡಿ ಮಾಹಿತಿ ಸಂಗ್ರಹ ಮಾಡುವ ಕೆಲಸ ಆರಂಭಿಸಿದೆ. ಹೀಗಾಗಿ ಕೆಲ ಅಕೌಂಟ್ ಗಳ ಮಾಹಿತಿ ನೀಡುವಂತೆ ಬ್ಯಾಂಕ್ಗೆ ಇಡಿ ಪತ್ರದ ಮೂಲಕ ಮನವಿ ಮಾಡಿದೆ.
ಧರ್ಮಸ್ಥಳ ಕುರಿತು ಸಾಕಷ್ಟು ಅಪಪ್ರಚಾರ ಮಾಡಲಾಗಿದೆ. ಶವಗಳನ್ನು ಹೂತಿಡಲಾಗಿದೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಎಸ್ಐಟಿ ಪರಿಶೀಲನೆ ಮಾಡಿದಾಗ ಒಂದೋ, ಎರಡೋ ಬುರುಡೆ, ಮೂಳೆಗಳು ಪತ್ತೆ ಆಗಿದ್ದವು. ಮಾಸ್ಕ್ಮ್ಯಾನ್ ತೋರಿಸಿದ ಎಲ್ಲ ಕಡೆಯೂ ಮೂಳೆಗಳು ಏನು ಸಿಕ್ಕಿರಲಿಲ್ಲ. ಇದಾದ ಮೇಲೆ ತನಿಖೆ ಚುರುಕು ಪಡೆಯುತ್ತಿದ್ದಂತೆ ವಿದೇಶಗಳಿಂದ ಫಂಡಿಂಗ್ ಆಗಿರುವ ಆರೋಪಗಳು ಕೇಳಿ ಬಂದಿದ್ದವು. ಈ ದೂರು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ವಿದೇಶಿ ಫಂಡಿಂಗ್ ಸಾಧ್ಯತೆ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಸುರೇಶ್ ಗೌಡ ಅವರು ಕೇಂದ್ರ ಸರ್ಕಾರಕ್ಕೆ ತನಿಖೆಗಾಗಿ ಪತ್ರ ಬರೆದಿದ್ದರು. ಈ ಪತ್ರಗಳನ್ನು ಕೇಂದ್ರವು ಇ.ಡಿ.ಗೆ ವರ್ಗಾಯಿಸಿತ್ತು. ಈ ನಡುವೆ ಬಿಜೆಪಿ, ಜೆಡಿಎಸ್ ಮತ್ತಿತರ ಮುಖಂಡರು ಕೂಡ ಇ.ಡಿ. ಹಾಗೂ ಎನ್ಐಎ ತನಿಖೆಗೆ ಆಗ್ರಹಿಸಿದ್ದರು. ಈಗ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಪ್ರಾಥಮಿಕ ತನಿಖೆಗೆ (ಪ್ರಿಲಿಮಿನರಿ ಇನ್‌ವೆಸ್ಟಿಗೇಷನ್) ಇಳಿದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಈ ಬಗ್ಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದು ಗೊತ್ತಾಗಿದೆ.