ಕಾರ್ಕಳ: ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ದೇವಸ್ಥಾನದ ಜಾಗವನ್ನು ಕಬಳಿಸಿದ್ದಾರೆ ಎನ್ನುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಮಿತಿ ಸದಸ್ಯ ಪ್ರಕಾಶ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ 50 ವರ್ಷಗಳಿಂದ ಶಿವರಾಮ ಶೆಟ್ಟಿಯವರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ದೇವಳದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಈ ಕಾರ್ಯಕ್ಕೆ ಗ್ರಾಮದ ಭಕ್ತಾದಿಗಳು, ಮುಂಬಯಿ ಉದ್ಯಮಿಗಳು, ಊರಿನ ಗಣ್ಯರು, ಅರ್ಚಕ ವರ್ಗ ಸೇರಿದಂತೆ ಎಲ್ಲರೂ ಕೈಜೋಡಿಸಿದ್ದಾರೆ.ಆದರೆ ಅಜೆಕಾರಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ದುಷ್ಟಕೂಟದ ಸದಸ್ಯರು ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಶಿವರಾಮ ಶೆಟ್ಟಿಯವರಿಗೆ ತಪ್ಪು ಮಾಹಿತಿ ನೀಡಿ ಜಾಗ ಕಬಳಿಸಿರುವ ಸುಳ್ಳು ಆರೋಪ ಮಾಡಿದ್ದಾರೆ.
ವಿಷ್ಣುಮೂರ್ತಿ ದೇವರ ದರ್ಶನಕ್ಕೆ ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗುವ ನಾನು ಆಸ್ತಿ ಕಬಳಿಸಿರುವುದು ನಂಬಲು ಸಾಧ್ಯವೇ ಎಂದು ಪ್ರಕಾಶ ಶೆಟ್ಟಿ ಪ್ರಶ್ನಿಸಿದ್ದಾರೆ.ಈ ಹಿಂದೆ ದೇವಸ್ಥಾನಕ್ಕೆ 2.72 ಎಕರೆ ಜಾಗವನ್ನು ಖರೀದಿಸಲಾಗಿತ್ತು. ಆ ಜಾಗ ಖರೀದಿಸಲು ಎಲ್ಲರಿಗಿಂತ ಹೆಚ್ಚಿನ ಹಣವನ್ನು ಕೊಟ್ಟ ಕಾರಣದಿಂದ ಸಮಿತಿಯವರ ನಿರ್ದೇಶನದ ಮೇರೆಗೆ ಜಾಗವನ್ನು ನನ್ನ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಆ ಜಾಗದ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇರುವ ಹಿನ್ನೆಲೆಯಲ್ಲಿ ಹಾಗೂ ದೇವಸ್ಥಾನಕ್ಕೆ ಜಾಗ ಖರೀದಿಸಲು ಕಾನೂನು ತೊಡಕು ಇದ್ದ ಕಾರಣದಿಂದ ದೇವಸ್ಥಾನದ ಹೆಸರಿನಲ್ಲಿ ದಾಖಲೆಪತ್ರದ ನೋಂದಣಿ ಸಾಧ್ಯವಾಗಿಲ್ಲ. ಆದರೆ ಇತ್ತೀಚೆಗೆ ಆ ಕಾನೂನಿಗೆ ತಿದ್ದುಪಡಿ ಮಾಡಿ ದೇವಸ್ಥಾನಕ್ಕೆ ಕೃಷಿ ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ನನ್ನ ಹೆಸರಿನಲ್ಲಿರುವ ದೇವಸ್ಥಾನದ ಜಾಗವನ್ನು ಶೀಘ್ರದಲ್ಲೇ ದೇವಸ್ಥಾನಕ್ಕೆ ಮರಳಿಸುವುದಾಗಿ ಪ್ರಕಾಶ ಶೆಟ್ಟಿ ಭರವಸೆ ನೀಡಿದ್ದಾರೆ.
ಇದಲ್ಲದೇ ನನ್ನ ವಿರುದ್ಧ ದೇವಸ್ಥಾನದ ಜಾಗ ಕಬಳಿಕೆ ಕುರಿತು ಧಾರ್ಮಿಕ ದತ್ತಿ ಸಮಿತಿಗೆ ಸುಳ್ಳು ದೂರು ನೀಡಲಾಗಿತ್ತು. ಈ ದೂರಿನ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಮನಗಂಡು ನನ್ನನ್ನು ವ್ಯವಸ್ಥಾಪನ ಸಮಿತಿಗೆ ಆಯ್ಕೆ ಮಾಡಿದ್ದಾರೆ. ಇದಲ್ಲದೇ ವ್ಯವಸ್ಥಾಪನ ಸಮಿತಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆದಿದೆ.ಇದಲ್ಲದೇ ಕೆಲವರು ಶಿವರಾಮ ಶೆಟ್ಟಿಯವರನ್ನು ಮುಂದಿಟ್ಟುಕೊಂಡು ರಾಜಕೀಯಕ್ಕಾಗಿ ಗ್ರಾಮದ ಹಿಂದೂ ಬಾಂಧವರನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ.ಮರ್ಣೆ ಗ್ರಾಮಸ್ಥರು ಹಾಗೂ ಮಹನೀಯರು ನೂತನ ಸಮಿತಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಪ್ರಕಾಶ ಶೆಟ್ಟಿ ಮನವಿ ಮಾಡಿದ್ದಾರೆ.