
ಕಾರ್ಕಳ, ನ.30: ದೇಶದ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯ ನಡೆಯಬೇಕಿದ್ದು, ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯು ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಹತ್ತರ ಕೊಡುಗೆ ನೀಡುತ್ತಿದೆ,ಇದಲ್ಲದೇ ಆಳ್ವಾಸ್ ಶಿಕ್ಷಣ ಸಂಸ್ಥೆಯು ಶಿಕ್ಷಣದ ಜೊತೆಗೆ ರಾಷ್ಟ್ರೀಯತೆ ಹಾಗೂ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಕಾರ್ಕಳ ಶಾಸಕ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಹೇಳಿದರು.
ಅವರು ಶನಿವಾರ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಪ್ರೊ. ಎಂ. ರಾಮಚಂದ್ರ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವಭಾರತ ಕಟ್ಟುವ ಪ್ರಧಾನಿ ಮೋದಿ ಕನಸಿಗೆ ನಾವು ಎಲ್ಲರೂ ಹೆಜ್ಜೆ ಹಾಕೋಣ ಎಂದರು.
ಉದ್ಯಮಿ ಬರೋಡಾ ಶಶಿಧರ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಯು ಕೇವಲ ಶಿಕ್ಷಣಕ್ಕೆ ಸೀಮಿತವಾಗಿಲ್ಲ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜೊತೆಗೆ ಸಂಸ್ಕೃತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ರಾಜ್ಯ–ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ. ಸಾಂಸ್ಕೃತಿಕ ಕಾರ್ಯದ ಮೂಲಕ ಈ ನೆಲದ ಸಾಂಸ್ಕೃತಿಕ ರಂಗದ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ. ಮೋಹನ್ ಆಳ್ವಾರ ಅವರ ಜನಪರ ಸ್ವಭಾವ, ಸರಳತೆ, ಮಹತ್ವಾಕಾಂಕ್ಷೆಯ ಕೆಲಸಗಳು ಆಳ್ವಾಸ್ ಅನ್ನು ವಿಶಿಷ್ಟವಾಗಿಸಿವೆ. ಆಳ್ವಾಸ್ ಸಂಸ್ಥೆಯ ಹಿರಿಮೆ ಅದರ ವ್ಯಾಪಕ ಶಿಕ್ಷಣ ವ್ಯವಸ್ಥೆ, ಸಾಂಸ್ಕೃತಿಕ ಉತ್ಸವಗಳು ಮತ್ತು ಕನ್ನಡ ನಾಡು–ನುಡಿ ಸಂಸ್ಕೃತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಡಿದ ಸೇವೆ ಅನನ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಕಾರ್ಕಳ ಘಟಕದ ವೇದಿಕೆಗೆ ನನ್ನ ಗುರುಗಳಾದ ಕವಿ ಎಂ. ರಾಮಚಂದ್ರರ ಹೆಸರಿಡಲಾಗಿದೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು. ಆಳ್ವಾಸ್ ವಿರಾಸತ್ 30 ವರ್ಷಗಳಿಂದ ನಡೆಯುತ್ತಾ ಈಗ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ದೇಶವಿದೇಶಗಳಲ್ಲಿ 88 ಕಡೆಗಳಲ್ಲಿ ನುಡಿಸಿರಿ ವಿರಾಸತ್ ಘಟಕಗಳನ್ನು ರೂಪಿಸಲಾಗಿದೆ. ಫೆಬ್ರವರಿ ಅಂತ್ಯದೊಳಗೆ 50 ಘಟಕಗಳಲ್ಲಿ ವೈಭವಯುತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಈ ಸಂಸ್ಕೃತಿಕ ವೈಭವದ ಮೂಲಕ ಯುವಪೀಳಿಗೆಗೆ ಏಕತೆ–ಸಾಮರಸ್ಯದ ಸಂದೇಶವನ್ನು ತಲುಪಿಸುವುದು ನಮ್ಮ ಉದ್ದೇಶ. ಜಾತಿ, ಧರ್ಮ, ಭಾಷೆ ಮೀರಿದ ಭಾರತದ ಸಂಪ್ರದಾಯವನ್ನು ತೋರಿಸುವುದು ನಮ್ಮ ಗುರಿ. ಆಳ್ವಾಸ್ ಅನ್ನು ‘ಮಿನಿ ಇಂಡಿಯಾ’ ಆಗಿ ರೂಪಿಸುವ ಕನಸು ನಮ್ಮದು. 144 ಕೋಟಿ ಜನಸಂಖ್ಯೆಯ ದೇಶದಲ್ಲಿ 52 ಕೋಟಿ ಯುವಕರಿದ್ದಾರೆ. ಉತ್ತಮ ಸಂಸ್ಕಾರ, ಸಮರ್ಪಣೆ ಮತ್ತು ದೇಶಭಕ್ತಿಯನ್ನು ಬೆಳೆಸುವ ಕಾರ್ಯಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ ಬದ್ಧ ಎಂದರು. ಈ ವರ್ಷದ ಸಾಂಸ್ಕೃತಿಕ ವೈಭವವನ್ನು ದಿವಂಗತ ಎಂ.ಕೆ. ವಿಜಯಕುಮಾರ್ ಅವರ ಸ್ಮರಣೆಗೆ ಅರ್ಪಿಸಲಾಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ತಹಶೀಲ್ದಾರ್ ಪ್ರದೀಪ್, ಶ್ರೀಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್, ಕಾಂಗ್ರೆಸ್ ಮುಖಂಡ ಮುನಿಯಲು ಉದಯ್ ಶೆಟ್ಟಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣನಾಥ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ನುಡಿಸಿರಿ–ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಪ್ರಮುಖರಾದ ಗುಣಪಾಲ ಕಡಂಬ, ದಿನೇಶ್ ಜಿ.ಡಿ., ರವೀಂದ್ರ ಶೆಟ್ಟಿ ಬಜಗೋಳಿ, ಸುಗ್ಗಿ ಸುಧಾಕರ ಶೆಟ್ಟಿ, ಮುನಿರಾಜ ರೆಂಜಾಳ, ಮಿತ್ರ ಪ್ರಭಾ ಹೆಗ್ಡೆ, ನಿತ್ಯಾನಂದ ಪೈ ಮೊದಲಾದ ಪ್ರಮುಖರು ಭಾಗವಹಿಸಿದ್ದರು. ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ವಂದಿಸಿ, ವೇಣುಗೋಪಾಲ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಭಾರತೀಯ ಕಲಾ ಪ್ರಕಾರಗಳ ಮನಮುಟ್ಟುವ ಪ್ರದರ್ಶನ ನೀಡಿದರು. ಯೋಗ ದೀಪಿಕಾ ,ಅಷ್ಟಲಕ್ಷ್ಮಿ ಶಾಸ್ತ್ರೀಯ ನೃತ್ಯ ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ ಗುಜರಾತಿನ ದಾಂಡಿಯಾಮಣಿಪುರಿ ಸ್ಟಿಕ್ ಡಾನ್ಸ್ ಮಲ್ಲಕಂಬ ಹಾಗೂ ಕಸರತ್ತು ಸೃಜನಾತ್ಮಕ ನೃತ್ಯಡೊಳ್ಳು ಕುಣಿತ , ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ ತೆಂಕುತಿಟ್ಟು ಯಕ್ಷಗಾನ ‘ಹಿರಣ್ಯಾಕ್ಷ ವಧೆ’, ಬೊಂಬೆ ವಿನೋದಾವಳಿ, ಇತ್ಯಾದಿ ವಿವಿಧ ಕಲಾರೂಪಗಳು ಕಣ್ಮನ ಸೆಳೆಯಿತು.

.
.
