ಕಾರ್ಕಳ : ಕನ್ನಡಕ್ಕೆ ಸಂಸ್ಕೃತದ ಪ್ರಭಾವ ಅನಾದಿ ಕಾಲದಿಂದಲೂ ಆಗಿದೆ. ಸಂಸ್ಕೃತ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಕನ್ನಡ ಸಾಹಿತ್ಯzಪ್ರತಿಯೊಂದು ವಿಚಾರದಲ್ಲೂ ವಿಶಿಷ್ಟ ಕೊಡುಗೆಯನ್ನು ಕೊಟ್ಟಿದೆ. ಭಾಷಾಂತರ ಪ್ರಕ್ರಿಯೆ ಇಂದು ಜೀವನದ ಎಲ್ಲಾ ಸಂದರ್ಭಗಳಲ್ಲಿ ನಾವು
ಮಾಡಿಕೊಳ್ಳುತ್ತೇವೆ. ಅರ್ಥವಾಗದ ಮತ್ತು ಅರ್ಥವಾಗುವ ಭಾಷೆಗಳನಡುವೆ ಮಾತ್ರ ಅನುವಾದಗಳಲ್ಲ, ನಮಗೆ ತಿಳಿದಿರುವ ಭಾಷೆಯಾದರೂ
ಮಾನಸಿಕವಾಗಿ ಅನುವಾದಗಳು ಬೇಕಾಗುತ್ತವೆ.ಯಾಕೆಂದರೆ ಇಂದು ಸ್ಥಳೀಯ ಭಾಷೆಗಳಲ್ಲೂ ಸಾಕಷ್ಟು ವ್ಯತ್ಯಾಸಗಳು ಇರುವುದರಿಂದ
ಅನುವಾದಗಳು ಮಾತ್ರವಲ್ಲ ಪರಸ್ಪರ ಭಾಷಿಕ ಕೊಡುಗೆಗಳನ್ನು ಸ್ಮರಿಸಿಕೊಳ್ಳುವುದು ಅಗತ್ಯವೆನಿಸುತ್ತದೆ ಎಂಬುದಾಗಿ ಹಂಪಿಯ ಕನ್ನಡ
ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪರಮಶಿವಮೂರ್ತಿ ಅವರು ಹೇಳಿದರು.
ಅವರು ಫೆ.28ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಂಪಿಯ ಕನ್ನಡ ವಿವಿಯ ಭಾಷಾಂತರ ಅಧ್ಯಯನ ವಿಭಾಗದ ವತಿಯಿಂದ ನಡೆದ ಶ್ರೀ
ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿ ಉಪನ್ಯಾಸಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದತ್ತಿ ಉಪನ್ಯಾಸವನ್ನು ಕಾಸರಗೋಡಿನ ವಿಶ್ರಾಂತ ಪ್ರಾಧ್ಯಾಪಕ, ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಅವರು ಕನ್ನಡ ಸಾಹಿತ್ಯದ ಮೇಲೆ ಸಂಸ್ಕೃತದ ಪ್ರಭಾವ ಎಂಬ ವಿಚಾರವಾಗಿ ನೀಡಿದರು. ದಂಡಿ, ಬಾಮಹ, ಕಾಳಿದಾಸ, ಭವಭೂತಿ ಮುಂತಾದ ಸಂಸ್ಕೃತ ಕವಿಗಳಿಂದ ಕನ್ನಡದ ಕವಿಗಳು ಪಡೆದುಕೊಂಡ ಎಲ್ಲಾ ಅಂಶಗಳನ್ನು ಸೋದಾರಣವಾಗಿ ವಿವರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಮಂಡಳಿಯ ಅಧ್ಯಕ್ಷರಾದ ಸಿಎ ಶಿವಾನಂದ ಪೈಯವರು ವಹಿಸಿಕೊಂಡು ಇಂದು ಜಾಗತಿಕವಾಗಿ ಆಧುನಿಕ ಅಂಶಗಳು ಪ್ರಬಲವಾಗಿ ಬೆಳೆದರೂ ಪರಸ್ಪರ ಭಾಷೆಗಳ ಕೊಡುಗೆಯನ್ನು ಸ್ಮರಿಸಬೇಕು. ಇಂದು ಕನ್ನಡ ಭಾಷೆಯ
ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆ ಸಂಸ್ಕೃತದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಹಲವು ಪದಗಳು ಕನ್ನಡದಿಂದ ಮಾಯವಾದರೂ
ಸೇರ್ಪಡೆಗಳು ಆಗುತ್ತಲೇ ಇವೆ ಎಂದರು. ದತ್ತಿನಿಧಿ ಸಂಸ್ಥಾಪಕರಾದ ಪ್ರೊ. ಎ.ವಿ.ನಾವಡರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಆಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ ಕುಂಟಾರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ. ಕೋಟ್ಯಾನ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಅರುಣಕುಮಾರ ಎಸ್. ಆರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕರಾದ ಪ್ರೊ.ನಾಗಭೂಷಣ ವಂದಿಸಿದರು. ಕನ್ನಡ ವಿಭಾಗದ ವನಿತಾ ಶೆಟ್ಟಿ ವಂದಿಸಿದರು.