ಕಾರ್ಕಳ: ಮೀನು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಅಂಜಲ್ ಮೀನು ಕಳವು ಪ್ರಕರಣ ಕಾರ್ಕಳ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿ ಬಳಿಕ ಅಂಜಲ್ ಮೀನು ಮಾಲೀಕ, ಕದ್ದವನು ಹಾಗೂ ತಿಂದವನ ನಡುವಿನ ರಾಜಿ ಸಂಧಾನದ ಮಾತುಕತೆಯ ಮೂಲಕ ಈ ವಿವಾದ ಠಾಣೆಯಲ್ಲೇ ಬಗೆಹರಿದ ಕುತೂಹಲಕಾರಿ ಘಟನೆ ವರದಿಯಾಗಿದೆ.
ಕಾರ್ಕಳದ ಮೀನು ಮಾರುಕಟ್ಟೆಯಲ್ಲಿ ಮಾಲಾ ಎಂಬವರು ಮೀನು ವ್ಯಾಪಾರ ಮಾಡಿಕೊಂಡಿದ್ದು, ಕಳೆದ ಜೂ.9 ರಂದು ಅವರ 6500 ಮೌಲ್ಯದ ಅಂಜಲ್ ಮೀನು ಕಳುವಾಗಿತ್ತು.ಸಾಣೂರಿನ ಗ್ರಾಹಕರೊಬ್ಬರು ಹುಟ್ಟು ಹಬ್ಬದ ಕಾರ್ಯಕ್ರಮಕ್ಕಾಗಿ ಮೀನು ವ್ಯಾಪಾರಿ ಮಾಲಾ ಎಂಬವರಲ್ಲಿ ದುಬಾರಿ ಬೆಲೆಯ ಅಂಜಲ್ ಮೀನು ಬುಕ್ ಮಾಡಿದ್ದರು. ಅದರಂತೆ ಮಾಲಾ ಅವರು 6500 ಸಾವಿರ ಮೌಲ್ಯದ 6.50 ಕೆ.ಜಿ ತೂಕದ ಒಂದು ಅಂಜಲ್ ಮೀನು ಫ್ರಿಡ್ಜ್ ನಲ್ಲಿಟ್ಟಿದ್ದರು. ಮರುದಿನ ಗ್ರಾಹಕ ಮೀನು ಕೊಡುವಂತೆ ಕೇಳಿದಾಗ ಫ್ರಿಡ್ಜ್ ನಲ್ಲಿದ್ದ ಅಂಜಲ್ ಮೀನು ನಾಪತ್ತೆಯಾಗಿತ್ತು.ಮೀನು ಕಳವುಗೈದ ಕಳ್ಳನ ಪತ್ತೆಗೆ ಯತ್ನಿಸಿದರೂ ಕಳ್ಳ ಪತ್ತೆಯಾಗದ ಹಿನ್ನೆಲೆಯಲ್ಲಿ
ಮೀನು ವ್ಯಾಪಾರಿ ಮಾಲಾ ಅವರ ಪುತ್ರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ .
ಈ ಪ್ರಕರಣದ ಕುರಿತು ಅನುಮಾನದ ಮೇರೆಗೆ ಪೊಲೀಸರು ಸೂರಜ್ ಎಂಬಾತನನ್ನು ಕರೆದು ವಿಚಾರಿಸಿದಾಗ ಕುಡಿತಕ್ಕಾಗಿ ಅಂಜಲ್ ಮೀನು ಕಳವುಗೈದ ವಿಚಾರ ಒಪ್ಪಿಕೊಂಡಿದ್ದಾನೆ. ತಾನು ಕದ್ದ 6500 ಸಾವಿರ ಮೌಲ್ಯದ ಅಂಜಲ್ ಮೀನನ್ನು ಒಂದು ಕ್ವಾರ್ಟರ್ ಮದ್ಯಕ್ಕಾಗಿ ಕೇವಲ 140 ರೂಪಾಯಿಗೆ ಮಾರ್ಕೆಟ್ ಬಳಿಯ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಈತನ ಹೇಳಿಕೆ ಆಧರಿಸಿ ಪೊಲೀಸರು ಮೀನು ಖರೀದಿಸಿದ್ದ ಹೂವಿನ ವ್ಯಾಪಾರಿಗೆ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ.
ಬಳಿಕ ಮೀನು ವ್ಯಾಪಾರಿ ಮಾಲಾ ಅವರಿಗೆ ಅಂಜಲ್ ಮೀನಿನ ನಿಜವಾದ ಮೌಲ್ಯವನ್ನು ನೀಡಲು ಒಪ್ಪಿಕೊಂಡಿದ್ದಾನೆ. ಸಧ್ಯಕ್ಕೆ 3 ಸಾವಿರ ರೂ. ಪಾವತಿಸಿ, ಉಳಿದ ಬಾಕಿ ಮೊತ್ತವನ್ನು ಜೂ.27ರಂದು ನೀಡುವುದಾಗಿ ಒಪ್ಪಿಕೊಂಡ ಬಳಿಕ,ಪೊಲೀಸರು ಮುಚ್ಚಳಿಕೆ ಬರೆಯಿಸಿ ಈ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ.
ಕುಡಿತದ ಚಟ ಎಂತಹವರನ್ನೂ ಕೂಡ ದಾರಿ ತಪ್ಪಿಸುತ್ತದೆ ಎನ್ನುವುದಕ್ಕೆ ಕಾರ್ಕಳದ ಮೀನು ಮಾರುಕಟ್ಟೆಯಲ್ಲಿ ನಡೆದ ಅಂಜಲ್ ಮೀನು ಕಳವು ಪ್ರಕರಣ ಸಾಕ್ಷಿಯಾಗಿದೆ.











