
ಹೆಬ್ರಿ: ಮುನಿಯಾಲಿನ ಕೆ. ಪಿ. ಎಸ್ ಶಾಲೆಯ ಪದವಿ ಪೂರ್ವ ವಿಭಾಗದ ವಾರ್ಷಿಕೋತ್ಸವ ಸಮಾರಂಭವು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪದ್ಮಾವತಿ ಕಲಾಮಂದಿರದಲ್ಲಿ ನೆರವೇರಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ವಿ ಸುನಿಲ್ ಕುಮಾರ್ ಮಾತನಾಡಿ, ತಾಲೂಕಿನ ಸುಸಜ್ಜಿತ ಸರಕಾರಿ ಶಾಲೆಗಳಲ್ಲಿ ಒಂದಾದ ಮುನಿಯಾಲಿನಲ್ಲಿ ಕೆ. ಪಿ. ಎಸ್ ಶಾಲೆಯನ್ನಾಗಿ ಪರಿವರ್ತಿಸಿರುವುದು ಸ್ಥಳೀಯ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಈಗಾಗಲೇ ಎರಡು ಮಹಡಿಯ ಸುಸಜ್ಜಿತ ಕಟ್ಟಡವೂ ನಿರ್ಮಾಣವಾಗಿದ್ದು ಬಹಳಷ್ಟು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿರುವುದು ಸಂತೋಷದ ವಿಚಾರ. ಕ್ರೀಡಾ ವಿಭಾಗ, ಸಾಂಸ್ಕೃತಿಕ ರಂಗದ ಜೊತೆ ಜೊತೆಯಲ್ಲಿ ಕಲಿಕೆಯಲ್ಲೂ ಮಕ್ಕಳು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದರು.
ಶಾಲಾ ವಠಾರದಲ್ಲಿ ಸಭಾಂಗಣದ ವ್ಯವಸ್ಥೆ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವ ಕಾರಣ ಇಂತಹ ವಾರ್ಷಿಕೋತ್ಸವದ ಸಮಯದಲ್ಲಿ ಬೇರೆ ಸಭಾಂಗಣವನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ಶಾಲಾ ವಠಾರದಲ್ಲಿ ಸುಸಜ್ಜಿತ ಸಭಾಂಗಣಕ್ಕಾಗಿ ಶಾಸಕರ ನಿಧಿಯಿಂದ ರೂ 25 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ವರಂಗ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್, ಉದ್ಯಮಿ ದಿನೇಶ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ನಾಯಕ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹರೀಶ್ ಪೂಜಾರಿ, ಪಂಚಾಯತ್ ಸದಸ್ಯ ರತ್ನಾಕರ್ ಪೂಜಾರಿ, ರಮೇಶ್ ನಾಯರ್, ಉಪ ಪ್ರಾಂಶುಪಾಲ ರವೀಂದ್ರ ರಾವ್, ಪ್ರಾಥಮಿಕ ವಿಭಾಗದ ಶಿಕ್ಷಕಿ ಉಷಾ ಶೆಟ್ಟಿ, ಕಾಲೇಜು ವಿದ್ಯಾರ್ಥಿ ನಾಯಕ ಆಯುಷ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿ ನಾಯಕ ಶ್ರೇಯಸ್ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಶ್ರೀಮತಿ ಬೇಬಿ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕರಾದ ಜಯಶ್ರೀ ವಂದಿಸಿದರು. ಅನಿಲ್ ಕುಮಾರ್ ಜೈನ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಜರುಗಿದವು.

.
.
