ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಆಚಂಗಿ-ದೊಡ್ಡನಾಗರ ಬಳಿ ರೈಲ್ವೆ ಹಳಿ ಮೇಲೆ ಮತ್ತೆ ಭೂಕುಸಿತವಾಗಿದೆ ಹೀಗಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ವಾರದ ಹಿಂದೆ ಇದೆ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಬಳಿಕ ಮಣ್ಣು ತೆರವು ಮಾಡಿ ರೈಲು ಸಂಚಾರ ಆರಂಭ ಬಳಿಕ ಇದೀಗ ಮತ್ತೆ ಮಣ್ಣು ಕುಸಿತವಾಗಿದೆ.
ಭೂಕುಸಿತದಿಂದಾಗಿ ಮಾರ್ಗಮಧ್ಯೆ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಕಳೆದ ಒಂದು ಗಂಟೆಯಿಂದ ಬಾಳ್ಳುಪೇಟೆ ಬಳಿ ನಿಂತುಕೊಂಡಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಪರಿಶೀಲನೆ ಮಾಡಿದ್ದಾರೆ.
ಜುಲೈ 26 ರಂದು ಹಾಸನ ಜಿಲ್ಲೆಯ ಯೆಡಕುಮೇರಿ ಹಾಗೂ ಕಡಗರವಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ 12 ರೈಲುಗಳು ರದ್ದುಗೊಂಡಿತ್ತು. ಬಳಿಕ ಇದನ್ನು ಸಮರೋಪಾದಿಯಲ್ಲಿ ಹಗಲು ರಾತ್ರಿ ಶ್ರಮವಹಿಸಿ ರೈಲ್ವೆ ವಲಯವು ಸರಿಪಡಿಸಿತ್ತು. ಆಗಸ್ಟ್ 8 ರಿಂದ ಮತ್ತೆ ರೈಲು ಸೇವೆ ಆರಂಭಗೊಂಡಿತ್ತು. ಇದಾಗಿ ಎರಡೇ ದಿನಕ್ಕೆ ಮತ್ತೆ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬಳ್ಳುಪೇಟೆ ಬಳಿ ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಬಿದ್ದಿತ್ತು. ಇದರಿಂದಾಗಿ ಈಗ ಮತ್ತೆ ರೈಲು ಸೇವೆ ಬಾಧಿತವಾಗಿತ್ತು. ಆದರೆ ಇದೀಗ ಮತ್ತೆ ಭೂಕುಸಿತ ಪುನರಾವರ್ತನೆಯಾಗಿದ್ದು, ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
`