ಮಂಗಳೂರು,ಸೆಪ್ಟೆಂಬರ್ 18: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಇದೀಗ ಮತ್ತೆ ಟ್ವಿಸ್ಟ್ ಸಿಕ್ಕಿದೆ. ಎಸ್‌ಐಟಿ (SIT) ಶೋಧದ ವೇಳೆ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರ, ತಲೆ ಬುರುಡೆ ಹಾಗೂ ಹಲವು ಮೂಳೆಗಳು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ ಎಂದು ಹೇಳಿರುವ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದು, ಮೊದಲಿಗೆ ಮೂಳೆಗಳು ಪತ್ತೆಯಾಗಿವೆ. ಬಳಿಕ ಭೂಮಿಯ ಮೇಲೆಯೇ ಮಾನವನ ತಲೆ ಬುರುಡೆ, ಅಸ್ಥಿಪಂಜರ, ಮೂಳೆಗಳು ಪತ್ತೆ ಆಗಿವೆ. ವಿಠಲಗೌಡನ ಸಹೋದರ ಪುರಂದರಗೌಡ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಭೇದಿಸುವ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸೆ.19ಕ್ಕೆ ವಿಚಾರಣೆಗೆ ಬರಲಿದೆ. ಹಾಗಾಗಿ ಎಸ್‌ಐಟಿ ಶೋಧ ಕೈಗೊಂಡಿದ್ದು, ಶೋಧದ ಫಲಿತಾಂಶ ಕುರಿತಂತೆ ಹೈಕೋರ್ಟ್‌ಗೆ ವರದಿ ನೀಡುವ ಸಾಧ್ಯತೆ ಇದೆ.
ಬಂಗ್ಲೆಗುಡ್ಡೆಯ ಐದು ಜಾಗಗಳಲ್ಲಿ ಬುಧವಾರ ಮಾನವ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿದೆ. ಅವುಗಳನ್ನು ಸುಕೊ ತಂಡದ ಸಹಾಯದಿಂದ ಎಸ್‌ಐಟಿ ಸಂಗ್ರಹಿಸಿದೆ. ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರತ್ಯೇಕ ಮೂರು ತಂಡಗಳಾಗಿ ಶೋಧ ಕಾರ್ಯ ನಡೆಸಿತು. ದಿನಪೂರ್ತಿ ಶೋಧ ಕಾರ್ಯಾಚರಣೆ ನಡೆಸಿದ್ದು, ಇಂದೂ ಶೋಧಕಾರ್ಯ ಮುಂದುವರಿಯಲಿದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಹೇಳಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯ ಸದ್ಯ ಜೈಲು ಸೇರಿದ್ದಾನೆ. ಇದರ ನಡುವೆ ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ಶವಗಳ ರಾಶಿ ಇದೆ ಎಂದು ಆರೋಪಿಸಿದ್ದಾರೆ. ಇದೇ ಹೇಳಿಕೆ ಸಂಚಲನ ಸೃಷ್ಟಿ ಮಾಡಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿತ್ತು. ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಬಂಗ್ಲೆಗುಡ್ಡಕ್ಕೆ ಪ್ರವೇಶ ಮಾಡಿದ್ದು ಶೋಧ ನಡೆಸಿದ್ದಾರೆ.