ಕಾರ್ಕಳ: ಗಣಹೋಮ ನಡೆಸಿ ಧಾರ್ಮಿಕತೆ ಮೆರೆದ ಅಂಗನವಾಡಿ ಕಾರ್ಯಕರ್ತೆಗೆ ಶಾಸಕರ ಒತ್ತಡದ ಮೇಲೆ ಅಮಾನತ್ತಿನ ಶಿಕ್ಷೆಯಾದರೆ, ಅನುದಾನ ಇಲ್ಲದೇ ಕಾಮಗಾರಿ ಗುದ್ದಲಿ ಪೂಜೆ ಮಾಡಿದ ಶಾಸಕರಿಗೆ ಯಾವ ಶಿಕ್ಷೆ ಆಗಬೇಕೆಂದು ಪ್ರಶ್ನಿಸುವ ಕಾಂಗ್ರೆಸ್ ವಕ್ತರರಾದ ಶುಭದ್ ರಾವ್‌ರವರೇ, ನಿಮ್ಮ ನಾಯಕ ಉದಯ್ ಕುಮಾರ್ ಶೆಟ್ಟಿಯವರು ತನ್ನ ರಾಜಕೀಯ ತೆವಲಿಗೋಸ್ಕರ ಒಬ್ಬ ಅಮಾಯಕ ಅಂಗನವಾಡಿ ಕಾರ್ಯಕರ್ತೆಯನ್ನ ಬಲಿಪಶುಮಾಡಿದಕ್ಕೆ ನಿಮ್ಮ ನಾಯಕನಿಗೆ ನೀವೇನು ಶಿಕ್ಷೆ ಕೊಡುತ್ತೀರಿ ಎಂದು ಮೊದಲು ಹೇಳಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ ಪ್ರಶ್ನಿಸಿದ್ದಾರೆ.
ಅಷ್ಟಕ್ಕೂ ಸರ್ಕಾರಿ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡಲು ಕಾರ್ಕಳ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಮುನಿಯಾಲು ಉದಯ್ ಶೆಟ್ಟಿ ಯಾರು? ಈ ಹಿಂದೆಯೂ ಸರ್ಕಾರಿ ಕಛೇರಿಗಳಿಗೆ ತೆರಳಿ ತಾನೇ ಜನಪ್ರತಿನಿಧಿ ಎಂಬ ರೀತಿಯಲ್ಲಿ ವರ್ತಿಸುವುದು, ಸಾರ್ವಜನಿಕ ಸರ್ಕಾರಿ ಕಛೇರಿಯಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಈ ಹಿಂದೆಯೂ ಅನೇಕ ಬಾರಿ ನಡೆದಿರುತ್ತದೆ. ಸಾರ್ವಜನಿಕ ವಲಯದಲ್ಲಿ ಇದರ ಬಗ್ಗೆ ಹಾಸ್ಯಾಸ್ಪದ ಚರ್ಚೆಯೂ ನಡೆದಿರುತ್ತದೆ. ಶುಭದ ರಾವ್ ಅವರೇ, ನೀವು ಒಬ್ಬ ಜನಪ್ರತಿನಿಧಿ. ಮುನಿಯಾಲು ಉದಯ್ ಶೆಟ್ಟಿಯವರಿಗೆ ನೀವೇ ಕೇಳಬೇಕು. ನೀವೊಬ್ಬ ಜನಪ್ರತಿನಿಧಿಯೇ? ಸರ್ಕಾರಿ ಕಟ್ಟಡವನ್ನು ಉದ್ಘಾಟನೆ ಮಾಡಲು ನಿಮಗೆ ಯಾವ ಅರ್ಹತೆಯಿದೆ? ನಿಮ್ಮಿಂದಾಗಿ ಏನೂ ಅರಿಯದ ಅಂಗನವಾಡಿ ಕಾರ್ಯಕರ್ತೆ ಒಬ್ಬರನ್ನು ಬಲಿ ಕೊಟ್ಟಿರಲ್ಲಾ. ಅದಕ್ಕಾಗಿ ಅಮಾನತಿಗೆ ಒಳಗಾದ ಅಂಗನವಾಡಿ ಕಾರ್ಯಕರ್ತೆಯ ಬಳಿ ಬೇಶರತ್ ಕ್ಷಮೆ ಯಾಚಿಸಬೇಕೆಂದು ಗಟ್ಟಿ ಧ್ವನಿಯಲ್ಲಿ ನಿಮ್ಮ ನಾಯಕರಿಗೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ರವರು ಕ್ಷೇತ್ರದಾದ್ಯಂತ ಎಷ್ಟು ಗುದ್ದಲಿ ಪೂಜೆ ಮಾಡಿದ್ದಾರೆ, ಎಷ್ಟು ಅಭಿವೃದ್ಧಿ ಯೋಜನೆಗಳನ್ನು ನಡೆಸಿದ್ದಾರೆ ಎಂಬುದು ಇಡೀ ಕಾರ್ಕಳದ ಪ್ರಜ್ಞಾವಂತ ನಾಗರಿಕರಿಗೆ ತಿಳಿದಿದೆ. ನಿಮಗೆ ತಿಳಿಯದಿದ್ದರೆ ಕೇಳಿ, ರಿಪೋರ್ಟ್ ಕಾರ್ಡ್ ಕೊಡುತ್ತೇವೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವೇ
ಕಳೆದರೂ, ಯಾವುದೇ ಅನುದಾನ ಬಿಡುಗಡೆ ಮಾಡದೇ, ಒಂದೇ ಒಂದು ಗುದ್ದಲಿ ಪೂಜೆಯೂ ಮಾಡದ ಕೀರ್ತಿಯು ನಿಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ಅಭಿವೃದ್ಧಿ ವಿಷಯದಲ್ಲಿ ನಮ್ಮ ಶಾಸಕರನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ. ನಿಮ್ಮ ಸಾಧನೆ ಏನಿದ್ದರೂ, ಬಿಜೆಪಿ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳನ್ನು ತಡೆಹಿಡಿದಿರುವುದು ಮಾತ್ರ ಎಂದು ಮುಟ್ಲುಪಾಡಿ ಸತೀಶ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.