ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರು-ಯರ್ಲಪಾಡಿ ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ಇಡೀ ಉಡುಪಿ ಜಿಲ್ಲೆಯಲ್ಲಿಯೇ ಪ್ರವಾಸೋದ್ಯಮ ದೃಷ್ಟಿಯಲ್ಲಿ ಗಮನಸೆಳೆದಿದ್ದು, ದಿನಂಪ್ರತಿ ಸಾವಿರಾರು ಜನ ಪ್ರವಾಸಿಗರು ಈ ಬೆಟ್ಟಕ್ಕೆ ಆಗಮಿಸಿ ಥೀಂ ಪಾರ್ಕ್ ವೀಕ್ಷಣೆ ಮಾಡುತ್ತಿದ್ದು, ಒಂದು ಉತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಈ ಮಧ್ಯೆ ಸದರಿ ಥೀಂ ಪಾರ್ಕ್ ಬಗ್ಗೆ ಕೆಲವೊಂದು ಆರೋಪಗಳು ಕೇಳಿಬಂದಿದ್ದು, ಥೀಂ ಪಾರ್ಕಿನ ಮುಂದುವರಿದ ಕಾಮಗಾರಿ ಸ್ಥಗಿತಗೊಂಡಿತ್ತು.
ಬಳಿಕ
ನಂತರ ಕಳೆದ ಅ.4 ರಂದು ಜಿಲ್ಲಾಧಿಕಾರಿಗಳು ಪರಶುರಾಮ ಮೂರ್ತಿಯ ಕೆಲವೊಂದು ಮರುವಿನ್ಯಾಸ ಹಾಗೂ ಬಾಕಿ ಇದ್ದ ಕಾಮಗಾರಿಯ ಬಾಬ್ತು ಪೂರ್ಣಗೊಳಿಸುವ ನಿಮಿತ್ತ ಕಾಮಗಾರಿ ಆರಂಭಿಸಿ ಶೀಘ್ರ ಮುಕ್ತಾಯಗೊಳಿಸುವಂತೆ ಆದೇಶ ಮಾಡಿದ್ದರು. ಈ ನಿಟ್ಟಿನಲ್ಲಿ ಕಾಮಗಾರಿ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಇದೇ ಮೇ ತಿಂಗಳ ಆರಂಭ ದಿನಗಳಲ್ಲಿ ಮರು ಪ್ರಾರಂಭಗೊಂಡ ಕಾಮಗಾರಿಯನ್ನು ಕೆಲವೇ ಗಂಟೆಗಳಲ್ಲಿ ಮತ್ತೆ ನಿಲ್ಲಿಸಲಾಗಿತ್ತು. ಹಾಗೂ ಉಮಿಕ್ಕಲ್ ಬೆಟ್ಟಕ್ಕೆ ಹೋಗುವ ಸಾರ್ವಜನಿಕ ರಸ್ತೆಗೆ ಹತ್ತಾರು ಲೋಡ್ ಮಣ್ಣನ್ನು ಹಾಕಿ ರಸ್ತೆಗೆ ತಡೆಯನ್ನೊಡ್ಡಿರುತ್ತಾರೆ.
ಉಮಿಕ್ಕಲ್ ಬೆಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಪರಶುರಾಮ ಥೀಂ ಪಾರ್ಕ್ ಮೊದಲಿನಂತೆಯೇ ಜನಾಕರ್ಷಣೀಯ ಕೇಂದ್ರವಾಗಿ ರೂಪುಗೊಳ್ಳುವುದು ನಮ್ಮೆಲ್ಲ ಜನಪ್ರತಿನಿಧಿಗಳ ಹಾಗೂ ಸ್ಥಳೀಯ ಜನರ ಒತ್ತಾಸೆಯಾಗಿದ್ದು, ಇಂತಹ ಪ್ರವಾಸೋದ್ಯಮ ಯೋಜನೆಯನ್ನು ಯಾವುದೇ ಸ್ಥಾಪಿತ ಹಿತಾಸಕ್ತಿಗೆ ಬಲಿಯಾಗಲು ಬಿಡದೆ ಜನತೆಗೆ, ಪ್ರವಾಸಿಗರಿಗೆ ಮುಕ್ತ ಪ್ರವೇಶ ಅತಿ ಶೀಘ್ರವಾಗಿ ದೊರೆಯುವಂತೆ ಕಾರ್ಕಳ ತಾಲೂಕಿನ ಬೈಲೂರು ಆಸುಪಾಸಿನ, ಹಾಗೂ ಇತರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
