Share this news

ನಿರಂತರವಾಗಿ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಯ ಹಾದಿಯೆಡೆಗೆ ನಾಗಾಲೋಟದಲ್ಲಿ ಓಡುತ್ತಿರುವ ಮನುಕುಲ ಎತ್ತ ಸಾಗುತ್ತಿದೆ ಎಂದು ಯಾರಾದರೂ ಊಹಿಸಿರುವಿರಾ? ಆಧುನಿಕತೆ ಹೆಜ್ಜೆ ಇಟ್ಟಂತೆ ,ಹೊಸ ಹೊಸ ಅನ್ವೇಷಣೆಗಳು ಹುಟ್ಟಿದಂತೆ ,ಮಾನವ ಕುಲ ತನ್ನ ಮೂಲವನ್ನು ಮರೆಯುತ್ತಾ ಸ್ವಂತಿಕೆ ಕಳೆದುಕೊಂಡಿರುವುದಂತೂ ಸತ್ಯ. ಅದೊಂದು ಕಾಲವಿತ್ತು. ಅಲ್ಲಿ ಆಧುನಿಕತೆಯ ಕುರುಹು ಇರಲಿಲ್ಲ. ಕಾಡುಗಳು ಮನುಷ್ಯನ ಒಡನಾಡಿಯಾಗಿದ್ದ ಕಾಲವದು.ನಾಡು ಎನ್ನುವ ಪದವೇ ಯೋಚನೆಗೂ ನಿಲುಕದಷ್ಟು ದೂರದಲ್ಲಿತ್ತು.ಸುತ್ತಲೂ ಹಸಿರಿನ ಉಡುಗೆಯನುಟ್ಟು ಶುದ್ಧ ಉಸಿರನ್ನು ಚೆಲ್ಲುವ ಪ್ರಕೃತಿ ಮಾತೆಯ ಮಡಿಲಲ್ಲಿ ಪ್ರಾಣಿ, ಪಕ್ಷಿ ಸಕಲ ಜೀವರಾಶಿಗೂ ಆಶ್ರಯ ನೀಡುವಷ್ಟು ಔದಾರ್ಯತೆ ಇತ್ತು. ಇಡೀ ಭೂಮಂಡಲವೇ ಪ್ರಕೃತಿಮಾತೆಯ ಸುಂದರ ತಾಣವಾಗಿತ್ತು. ಕಾಡು ಅದೆಷ್ಟು

ದಟ್ಟವಾಗಿತ್ತೆಂದರೆ ಸೂರ್ಯನ ಕಿರಣಗಳು ಧರೆಯ ತಲುಪಲು ಹರಸಾಹಸ ಪಡುತ್ತಿತ್ತು.ದುಂಬಿಗಳ ಝೇಂಕಾರ ಇಡೀ ಕಾನನವನ್ನು ನಾದಮಯ ವಾಗಿಸಿತ್ತು. ಅರಣ್ಯಗಳು ಸಂತೃಪ್ತಿಯ ನಗೆ ಬೀರಿ ನಿಸರ್ಗವನ್ನೇ ಭೂಲೋಕದ ಸ್ವರ್ಗವನ್ನಾಗಿಸಿತ್ತು.ಇಂತಹ ರಮ್ಯ ತಾಣ ಇಂದು ತನ್ನ ಇರುವಿಕೆಯನ್ನು ಹೆಸರಿಗಷ್ಟೇ ಉಳಿಸಿಕೊಂಡು ಅನಾಮಿಕವಾಗಿರುವುದು ಮಾತ್ರ ಪ್ರಕೃತಿಗೆ ಅರಗಿಸಿ ಕೊಳ್ಳಲಾಗದಿದ್ದರೂ ಒಪ್ಪಿಕೊಳ್ಳಲೇ ಬೇಕಾದ ಕಹಿ ಸತ್ಯ.ಹಚ್ಚ ಹಸಿರಾಗಿರುವ ಪ್ರಕೃತಿಯ ಮಡಿಲಲ್ಲಿ ಮಾನವ ತನ್ನ ದಿನನಿತ್ಯದ ಕೆಲಸವನ್ನು ನಿಸರ್ಗ ಮಲಿನಗೊಳ್ಳದಂತೆ ಕೈಗೊಳ್ಳುತ್ತಿದ್ದ. ತನ್ನ ಆಹಾರಕ್ಕಾಗಿ ಗೆಡ್ಡೆ ಗೆಣಸುಗಳು, ಹಣ್ಣುಹಂಪಲುಗಳು ಹಾಗೂ ಪ್ರಾಣಿಗಳನ್ನು ಬಳಸುತ್ತಿದ್ದ. ತನ್ನ ದೇಹವನ್ನು ಮುಚ್ಚಿಕೊಳ್ಳಲು ಮರದ ತೊಗಟೆ ಪ್ರಾಣಿಗಳ ಚರ್ಮ ಎಲೆಗಳನ್ನು ಬಳಸುತ್ತಿದ್ದ. ಕೂಡಿ ಬಾಳುವ ಪರಿಕಲ್ಪನೆ ಇತ್ತು. ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ,ಭೂಮಾಲಿನ್ಯ ,ಇದ್ಯಾವುದರ ಕಲ್ಪನೆಯೂ ಇರಲಿಲ್ಲ. ಹಸಿರು ಕಾನನದ ದಟ್ಟಾರಣ್ಯದಲ್ಲಿ ಗೆಡ್ಡೆ ಗೆಣಸು,ಹಣ್ಣು ಹಂಪಲುಗಳನ್ನು ತಿನ್ನುತ್ತಾ ಬೆಳೆದ ಮಾನವ ಅದೆಂದು ಬದಲಾದನೆಂದು ಅರಿವಾಗಲೇ ಇಲ್ಲ.ಅದ್ಯಾವಾಗ ಆಧುನಿಕತೆ ಎಂಬ ಕೂಸು ಜನಿಸಿತೋ ಮಾನವನ ಆಸೆ ಆಕಾಂಕ್ಷೆಗಳಿಗೆ ಕೊನೆಯೇ ಇಲ್ಲವಾಯಿತು.

ಕಾಡಿನಿಂದ ನಾಡಿಗೆ ಮಾನವನ ಪಯಣ:

ತನ್ನ ಅನುಕೂಲಕ್ಕೆಂದು ಅನ್ವೇಷಿಸಿದ ಎಷ್ಟೋ ತಂತ್ರಜ್ಞಾನಗಳು ಭೂಮಂಡಲವನ್ನು ಇಂಚು ಇಂಚಾಗಿ ವಿನಾಶದತ್ತ ಕೊಂಡೊಯ್ಯಲು ಕಾರಣೀಭೂತವಾಯಿತು. ಗುಡಿಸಲಿನ ಗೂಡೊಳಗೆ ಇದ್ದವನು ಮನೆಗಳ ನಿರ್ಮಾಣಕ್ಕೆ ತೊಡಗಿದ. ತನ್ನ ಅನುಕೂಲಕ್ಕಾಗಿ ಬಗೆ ಬಗೆಯ ಪೀಠೋಪಕರಣ ತಯಾರಿಸಿದ. ಅಲ್ಲಿಂದ ಅರಣ್ಯ ನಾಶ ಆರಂಭವಾಯಿತು .ಅರಣ್ಯ ನಾಶದಿಂದ ಪ್ರಾಣಿ ಸಂತತಿಯು ಅಳಿವಿನಂಚಿಗೆ ಬಂತು. ಸುಂದರವಾದ ವನ್ಯಜೀವಿಗಳ ತಾಣ ಈಗ ಮೃಗಾಲಯವಾಯಿತು. ಸ್ವತಂತ್ರ ಜೀವಿಗಳಿಗೆ ಈಗ ಜೈಲುವಾಸ. ಇದು ಆಧುನಿಕ ಮಾನವನ ಸ್ವಾರ್ಥ ಸಾಧನೆ. ಬೆಳಕು ಎಂದರೆ ಕೇವಲ ಬೆಂಕಿ ಎಂದು ಅರಿತವನು ಈಗ ವಿದ್ಯುತ್ ಕಂಡು ಹಿಡಿದ. ತದನಂತರ ತರತರದ ವಿದ್ಯುತ್ ಉಪಕರಣಗಳು ಹುಟ್ಟಿಕೊಂಡವು. ಎತ್ತಿನ ಗಾಡಿ, ಸೈಕಲ್ ಬಳಸುತ್ತಿದ್ದವನು ಭೂಮಿತಾಯಿಯ ಅಂತರಾಳ ಬಗೆದು ಪೆಟ್ರೋಲಿಯಂ ತೈಲವನ್ನು ಹೊರ ತೆಗೆದನು. ಅಲ್ಲಿಂದ ಆರಂಭವಾಯಿತು ವಾಹನಕ್ರಾಂತಿ. ಊರಿಗೊಂದರಂತೆ ಇದ್ದ ವಾಹನಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಮನೆಗೊಂದರಂತೆ, ನಂತರ ಪ್ರತಿ ವ್ಯಕ್ತಿಗೊಂದರಂತೆ ಬೆಳೆಯುತ್ತಾ ಸಾಗಿತು. ಪರಿಣಾಮವಾಗಿ ಸ್ವಚ್ಛಂದವಾದ ಜೀವದಾಯಿನಿ ಅನಿಲ ಈಗ ವಿಷಯುಕ್ತವಾಯಿತು. ವಿಷಗಾಳಿಯ ಸೇವನೆ ಅನೇಕ ರೋಗಗಳಿಗೆ ಉಗಮ ಸ್ಥಾನವಾಯಿತು. ಈ ಎಲ್ಲಾ ಬದಲಾವಣೆ ಮಾನವನ ಅಭಿವೃದ್ದಿ ಎಂದುಕೊಂಡರೂ ಇದರಿಂದ ಭೂಮಂಡಲದ ಮೇಲೆ ಆದಂತಹ ಪರಿಣಾಮ ಮಾತ್ರ ಎಲ್ಲೆಗೂ ಮೀರಿದ್ದು. ಕಳೆದ ಎರಡು ದಶಕಗಳಲ್ಲಿ ಜಾಗತಿಕ ತಾಪಮಾನ ಅಂಕೆಗೂ ಮೀರಿ ಬೆಳೆದಿದೆ. ಮಾನವನ ಲಂಗುಲಗಾಮಿಲ್ಲದ ವರ್ತನೆಗೆ ಅಂಕುಶ ಹಾಕದೆ ಹೋದರೆ ಧರೆಯ ವಿನಾಶವಂತೂ ಕಟ್ಟಿಟ್ಟ ಬುತ್ತಿ.

ತಾಪಮಾನ ಏರಿಕೆಯ ಕಾರಣಗಳು ಮತ್ತು ಪರಿಣಾಮಗಳು:

ದಿನದಿಂದ ದಿನಕ್ಕೆ ಮನುಷ್ಯನ ದಾಹ ಮಾತ್ರ ಹೆಚ್ಚಾಗಿ ಏರುಗತಿಯಲ್ಲಿ ಸಾಗುತ್ತಿದೆ. ವಾಹನಗಳಿಂದ ಬಿಡುಗಡೆಯಾಗುವ ಇಂಗಾಲದ ಡೈಯಾಕ್ಸೈಡ್,ಇಂಗಾಲದ ಮಾನಾಕ್ಸೈಡ್ ಗಳು ಪರಿಸರವನ್ನು ಮಲಿನ ಗೊಳಿಸುವ ಪ್ರಮುಖ ಮಾಲಿನ್ಯ ಕಾರಕಗಳು. ಕೈಗಾರಿಕಾ ಕ್ರಾಂತಿಯಿಂದ ಕಾರ್ಖಾನೆಗಳ ಸಂಖ್ಯೆ ನಾಯಿ ಕೊಡೆಗಳಂತೆ ಎಲ್ಲಿಂದರಲ್ಲಿ ಹುಟ್ಟಿಕೊಂಡವು .ಕಾರ್ಖಾನೆಗಳಿಂದ ಬಿಡುಗಡೆಯಾಗುವ ಸಲ್ಫರ್ ಡೈಯಾಕ್ಸೈಡ್ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆ ಉಂಟು ಮಾಡುವುದಲ್ಲದೆ , ಶ್ವಾಸಕೋಶದ

ಕ್ಯಾನ್ಸರ್ ಗೂ ಕಾರಣವಾಗಿದೆ. ಕೃಷಿ ಚಟುವಟಿಕೆಗಳಿಂದ ಬಿಡುಗಡೆಯಾಗುವ ಅಮೋನಿಯ ವಾತಾವರಣದ ತಾಪಮಾನವನ್ನು ಹೆಚ್ಚಿಸುತ್ತಿದೆ. ತ್ಯಾಜ್ಯ ವಸ್ತುಗಳ ಹೆಚ್ಚಿನ ಶೇಖರಣೆಯಿಂದ ಮೀಥೇನ್ ಅನಿಲ ಉತ್ಪತ್ತಿಯಾಗುತ್ತಿದೆ. ಹೀಗೆ ವಿವಿಧ ರೀತಿಯ ಮಾಲಿನ್ಯಗಳು ಕಾರ್ಬನ್ ಡೈಯಾಕ್ಸೈಡ್ ,ಮಿಥೇನನ್ನು ವಾತಾವರಣದಲ್ಲಿ ಅಧಿಕಗೊಳಿಸಿ ಶುಕ್ರ ಗ್ರಹದಲ್ಲಿ ಇರುವಂತೆ ಹಸಿರು ಮನೆ ಪರಿಣಾಮ ಉಂಟಾಗಲು ಕಾರಣವಾಯಿತು. ವಾತಾವರಣದ ಅನಿಲಗಳಲ್ಲಿರುವ ಅಸಮತೋಲನವು ಜಾಗತಿಕ ತಾಪಮಾನ ಏರಿಕೆಗೆ ಮೂಲ ಕಾರಣವಾಯಿತು. ವಾಯು ಮಾಲಿನ್ಯ ದಿಂದ ಹ್ಯಾಲೋನ್ ಗಳು, ಕ್ಲೋರೋ ಫ್ಲೋರೋ ಕಾರ್ಬನ್ ಗಳು ಮತ್ತು ಹೈಡ್ರೋಕ್ಲೋರೋ ಫ್ಲೋರೊ ಕಾರ್ಬನ್ ಗಳು ಪರಿಸರದ ಸ್ವಚ್ಛಂದ ಗಾಳಿಯ ಜಾಗವನ್ನು ಆಕ್ರಮಿಸಿಕೊಂಡಿತು.ಈ ಎಲ್ಲಾ ಹಾನಿಕಾರಕಗಳಿಂದ ಓಜೋನ್ ಪದರ ತನ್ನ ಸುರಕ್ಷಾ ಕವಚ ಕಳೆದುಕೊಳ್ಳುತ್ತಿದೆ. ಓಜೋನ್ ಪದರದ ಸವಕಳಿಯಿಂದ ಹಾನಿಕಾರಕ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬಿದ್ದು ಜನರಿಗೆ ಅನೇಕ ಚರ್ಮದ ರೋಗಗಳನ್ನು ಉಂಟು ಮಾಡಿತು. ಗಾಳಿಯಲ್ಲಿರುವ ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಮಳೆ ನೀರಿನಲ್ಲಿ ಬೆರೆತು ಆಮ್ಲ ಮಳೆಗೆ ಕಾರಣವಾಯಿತು. ಆಮ್ಲ ಮಳೆ ಸಸ್ಯ ,ಪ್ರಾಣಿಗಳಿಗೆ ಹಾನಿ ಮಾಡುವುದಷ್ಟೇ ಅಲ್ಲ ಐತಿಹಾಸಿಕ ವಾಸ್ತುಶಿಲ್ಪ ಸವಕಳಿಗೂ ಕಾರಣವಾಗಿದೆ. ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇರುವಂತೆ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸಲು ಪರಿಹಾರ ಹುಡುಕಲೇಬೇಕಾದ ಅನಿವಾರ್ಯತೆ ಮನುಕುಲಕ್ಕೆ ಇದೆ. ಭೂಮಂಡಲ ಅಧೋಗತಿಗೆ ಇಳಿಯುವುದನ್ನು ತಪ್ಪಿಸಲು ಅನ್ಯ ಮಾರ್ಗಗಳನ್ನು ಹುಡುಕಬೇಕಿದೆ.

ಬದಲಾವಣೆಯ ಹಾದಿಯಲ್ಲಿ ಮನುಕುಲ:
ಜೀವನಶೈಲಿಯಲ್ಲಿ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳುವ ಮೂಲಕ ಪರಿವರ್ತನೆ ತರಲು ಸಾಧ್ಯವಿದೆ. ಸೌರಶಕ್ತಿಯ ಮೂಲವನ್ನು ಸಾಧ್ಯವಾದಷ್ಟು ಬಳಸಲು ಉತ್ತೇಜಿಸುವುದು, ಅಗತ್ಯವಿಲ್ಲದಾಗ ವಿದ್ಯುತ್ ಬಳಸದಿರುವುದು, ಶಕ್ತಿಯ ನೈಸರ್ಗಿಕ ಮೂಲಗಳನ್ನು ಹಾಗೂ ನವೀಕರಿಸಬಹುದಾದ ಮೂಲಗಳನ್ನು ಹೆಚ್ಚಾಗಿ ಬಳಸಲು ಉತ್ತೇಜಿಸಬೇಕು. ತ್ಯಾಜ್ಯ ವಸ್ತುಗಳನ್ನು ವಿಘಟಿಸಿ ಬಳಕೆಗೆ ಯೋಗ್ಯ ಮಾಡಿ ಪುನರ್ಬಳಕೆ ಮಾಡಬೇಕು. ಪರಿಸರ ಅಸಮತೋಲನ ತಡೆಗಟ್ಟಲು ಹಾಗೂ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಜನರು ತಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಮರಗಳನ್ನು ನೆಡಲು ಕ್ರಮ ಕೈಗೊಳ್ಳಬೇಕು .ವಾಣಿಜ್ಯ ಉದ್ದೇಶಕ್ಕಾಗಿ ಮರ ಕಡಿಯಲು ಕಡಿವಾಣ ಹಾಕಬೇಕು.
ವಾತಾವರಣಕ್ಕೆ ಹಸಿರು ಮನೆ ಅನಿಲ ಬಿಡುಗಡೆಯಾಗುವುದನ್ನು ನಿಲ್ಲಿಸಲು ಸಾರ್ವಜನಿಕ ವಾಹನಗಳನ್ನು ಹೆಚ್ಚಾಗಿ ಬಳಸ ಬೇಕು.
ಬದಲಾವಣೆ ಜಗದ ನಿಯಮ,ಆದರೆ ಅದು ವಿಕೃತಿಗಾಗಿ ಆಗದೆ ಪ್ರಗತಿಗಾಗಿ ಆಗಬೇಕು.ಅವನತಿಗಾಗಿ ಆಗದೆ ಉನ್ನತಿಗಾಗಿ ನಡೆಯಬೇಕು.ಪರಿಸರದ ಉಳಿವಿಗಾಗಿ ಆಂದೋಲನವನ್ನು ಕೈಗೊಳ್ಳಬೇಕು.ಪರಿಸರ ರಕ್ಷಣೆಯ ತೀರ್ಮಾನ ನಮ್ಮೆಲ್ಲರ ಪ್ರಥಮ ಚಿಂತನವಾಗಬೇಕು.ಒಳಿತಿಗಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳೋಣವೆ?
ನೀವೇನಂತೀರಿ?…

🖋 ಪ್ರಜ್ವಲಾ ಶೆಣೈ, ಕಾರ್ಕಳ

 

 

 

 

 

 

 

Leave a Reply

Your email address will not be published. Required fields are marked *