ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಲಷ್ಕರ್-ಎ- ತೊಯ್ಬಾ ಭಯೋತ್ಪಾದಕ ಸಂಘಟನೆಯ ಉಗ್ರ ನಾಸಿರ್’ನನ್ನು ಪೊಲೀಸ್ ಡ್ರೆಸ್ ನಲ್ಲೇ ಬಾಂಗ್ಲಾದೇಶಕ್ಕೆ ಕಳುಹಿಸಲು ಬಂಧಿತ ASI ಚಾಂದ್ ಪಾಷಾ ಖತರ್ನಾಕ್ ತಂತ್ರ ರೂಪಿಸಿದ ಸ್ಪೋಟಕ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈಗಾಗಲೇ NIA ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದೆ. ಆರು ದಿನ ಕಸ್ಟಡಿ ಇಂದು (ಜು.14) ಮುಗಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಅನೀಸ್ ಫಾತಿಮಾ, ಎಎಸ್ಐ ಚಾನ್ ಪಾಷಾ ಮತ್ತು ವೈದ್ಯ ನಾಗರಾಜ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ನ್ಯಾಯಲಯ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ ವಾಗಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ ನಾಸಿರ್ನನ್ನು ನ್ಯಾಯಾಲಯಕ್ಕೆ ಕರೆತರುವಾಗ ಗ್ರೆನೇಡ್ ಸ್ಫೋಟಿಸಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗುವಂತೆ ಪ್ಲ್ಯಾನ್ ರೂಪಿಸಲಾಗಿತ್ತು. ಟಿ ನಾಸಿರ್ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಬಳಿಕ, ಆತನನ್ನು ಬಾಂಗ್ಲಾದೇಶಕ್ಕೆ ಕಳುಹಿಸಲು ಆರೋಪಿಗಳು ನಿರ್ಧರಿಸಿದ್ದರು ಎಂದು ಎನ್ಐಎ ವಿಚಾರಣೆ ತಿಳಿದುಬಂದಿದೆ.
ಉಗ್ರ ನಾಸೀರ್ಗೆ ಪೊಲೀಸ್ ಸಮವಸ್ತ್ರ ಧರಿಸಿ ಕರೆದುಕೊಂಡು ಹೋಗಬೇಕು ಎಂದು ಪ್ಲಾನ್ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳು 10 ಜೊತೆ ಪೊಲೀಸ್ ಸಮವಸ್ತ್ರ ಖರೀದಿ ಮಾಡಿದ್ದರು. ಸದ್ಯ ಹತ್ತೂ ಜೊತೆ ಪೊಲೀಸ್ ಸಮವಸ್ತ್ರಗಳನ್ನು ಎನ್ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪೊಲೀಸ್ ಸಮವಸ್ತ್ರ ಖರೀದಿಗೆ ಎಎಸ್ಐ ಚಾಂದ್ ಪಾಷ ಸಹಾಯ ಮಾಡಿದ್ದನು. ಎಎಸ್ಐ ಚಾಂದ್ ಪಾಷಾ ಸೂಚನೆ ಮೇರೆಗೆ ಉಳಿದ ಆರೋಪಿಗಳು ಶಿವಾಜಿನಗರದಲ್ಲಿ ಪೊಲೀಸ್ ಸಮವಸ್ತ್ರ ಖರೀದಿ ಮಾಡಿದ್ದರು. ಚಾಂದ್ ಪಾಷ ನಾಸಿರ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದನು. ಟಿ ನಾಸಿರ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲು ವಯಸ್ಸಾಗಿರುವ ಮತ್ತು ಶಕ್ತಿ ಇಲ್ಲದವರನ್ನು ನೇಮಕ ಮಾಡಿದ್ದನು.ನಂತರ ದಾರಿ ನಡುವೆ ಸ್ಫೋಟಿಸಿ, ಪೊಲೀಸ್ ಸಮವಸ್ತ್ರದಲ್ಲಿ ಟಿ ನಾಸಿರ್ನನ್ನು ಪರಾರಿ ಮಾಡಿಸುವುದು ಇವರ ಯೋಜನೆಯಾಗಿತ್ತು. ನಂತರ ಕೇರಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಸಮುದ್ರ ಮಾರ್ಗವಾಗಿ ಪಶ್ಚಿಮ ಬಂಗಾಳಕ್ಕೆ, ಇಲ್ಲಿಂದ ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋಗುವ ಪ್ಲಾನ್ ಆರೋಪಿಗಳು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.