ಕಾರ್ಕಳ: ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತಮ ಸಾರಿಗೆ ಸೇವೆಯನ್ನು ನೀಡಲು ನಾವು ಸದಾ ಬದ್ಧವಾಗಿರುವುದಾಗಿ ಕೆನರಾ ಬಸ್ಸು ಮಾಲಕರ ಸಂಘದ ಉಪಾಧ್ಯಕ್ಷ ಜೀವಂಧರ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಅವರು ಶುಕ್ರವಾರ ಕಾರ್ಕಳದ ರೋಟರಿ ಬಾಲಭವನದಲ್ಲಿ ತುರ್ತು ಸುದ್ಧಿಗೋಷ್ಟಿ ನಡೆಸಿ, ನಿಟ್ಟೆ ಕಾಲೇಜು ವಿದ್ಯಾರ್ಥಿಯೋರ್ವ ಬಸ್ಸಿನಿಂದ ಬಿದ್ದು ದಾರುಣವಾಗಿ ಮೃತಪಟ್ಟ ದುರ್ಘಟನೆಯ ಕುರಿತು ಬಸ್ಸು ಮಾಲಕರ ಸಂಘದ ಪರವಾಗಿ ಸಂತಾಪ ಸೂಚಿಸಿ,ಇಂತಹ ದುರ್ಘಟನೆ ಸಂಭವಿಸಿರುವುದು ಅತ್ಯಂತ ವಿಷಾದನೀಯ, ಮೃತ ವಿದ್ಯಾರ್ಥಿಯ ಕುಟುಂಬದ ಹಾಗೂ ಸಂಬಂಧಿಕರ ನೋವಿನಲ್ಲಿ ನಾವು ಕೂಡಾ ಭಾಗಿಗಳಾಗಿದ್ದೇವೆ. ಮುಂದೆ ಎಂದೂ ಇಂತಹ ದುಘಟನೆ ನಡೆಯದಂತೆ ನಾವು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಡುಬಿದ್ರಿ ಕಾರ್ಕಳ ಮಾರ್ಗದಲ್ಲಿ ಶಾಲಾ ಇಂತಹ ದುರ್ಘಟನೆ ನಡೆದ ಉದಾಹರಣೆಯೇ ಇಲ್ಲ, ಪ್ರಮುಖವಾಗಿ ಕಾರ್ಕಳ ಪಡುಬಿದ್ರೆ ಮಾರ್ಗದಲ್ಲಿ ಅವೈಜ್ಞಾನಿಕ ಹಂಪ್ಸ್ ಹಾಕಿದ ಪರಿಣಾಮ ಸಾಕಷ್ಟು ವಾಹನ ಅಪಘಾತಗಳು ಸಂಭವಿಸಿ ಸವಾರರು ಮೃತಪಟ್ಟಿದ್ದಾರೆ,ಆದ್ದರಿಂದ ಅಪಘಾತಕ್ಕೆ ಕಾರಣವಾಗುತ್ತಿರುವ ಅವೈಜ್ಞಾನಿಕ ಹಂಪ್ಸ್ ಗಳನ್ನು ತೆಗೆದು ಅವುಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಇದರಿಂದ ಅಪಘಾತಗಳನ್ನು ತಪ್ಪಿಸಲು ಸಾಧ್ಯ ಎಂದು ಸಲಹೆ ನೀಡಿದರು. ಶಾಲಾ ಕಾಲೇಜುಗಳ ಬೆಳಗ್ಗಿನ ಹಾಗೂ ಸಂಜೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದ ಸುರಕ್ಷತೆಯ ದೃಷ್ಟಿಯನ್ನಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಬಸ್ಸುಗಳನ್ನು ಓಡಿಸಲು ಚಾಲಕರು ಹಾಗೂ ನಿರ್ವಾಹಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಜೀವಂಧರ್ ಅಧಿಕಾರಿ ತಿಳಿಸಿದರು.
ಬಹುತೇಕ ಬಸ್ಸುಗಳಲ್ಲಿ ಸಿಸಿ ಟಿವಿ ಹಾಗೂ ಬಾಗಿಲುಗಳಿಲ್ಲದ ಕಾರಣದಿಂದ ಅಪಘಾತಗಳು ಸಂಭವಿಸುತ್ತಿವೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಅವರು, ಹಳೆಯ ಬಸ್ಸುಗಳಲ್ಲಿ ಇಂತಹ ಸಮಸ್ಯೆಯಿದೆ ಎಂದು ಒಪ್ಪಿಕೊಂಡ ಅವರು ಹೊಸ ಬಸ್ಸುಗಳಲ್ಲಿ ಸಿಸಿ ಟಿವಿ ಹಾಗೂ ಡೋರ್ ಗಳ ವ್ಯವಸ್ಥೆ ಅಳವಡಿಸಲಾಗುತ್ತಿದೆ ಆದ್ದರಿಂದ ಮುಂದೆ ಇಂತಹ ದುರ್ಘಟನೆಗಳು ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೃತಪಟ್ಟ ವಿದ್ಯಾರ್ಥಿಯ ಬಡ ಕುಟುಂಬಕ್ಕೆ ಬಸ್ಸು ಮಾಲಕರ ಸಂಘದಿAದ ಮಾನವೀಯ ನೆಲೆಯಲ್ಲಿ ತುರ್ತು ಪರಿಹಾರ ನೀಡಬೇಕೆಂದು ಪತ್ರಕರ್ತರು ಮನವಿ ಮಾಡಿದ ಹಿನ್ನಲೆಯಲ್ಲಿ ಈ ಕುರಿತು ಸಂಘದ ಸಭೆಯಲ್ಲಿ ಚರ್ಚಿಸಿ ಈ ಕುರಿತು ನಿಧಾರ ಕೈಗೊಳ್ಳಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಬಸ್ಸು ಮಾಲಕರಾದ ಅತುಲ್ ಅಡ್ಯಂತಾಯ, ಗೋಪಿನಾಥ ಭಟ್, ಸತ್ಯರಂಜನ್ ಶೆಟ್ಟಿ,ಹರೀಶ್, ಅಬ್ಬಾಸ್ ಆಲಿ ಉಪಸ್ಥಿತರಿದ್ದರು. ಬಸ್ಸು ಏಜೆಂಟರ ಬಳಗದ ಇಕ್ಬಾಲ್ ಅಹಮ್ಮದ್ ಸ್ವಾಗತಿಸಿ, ವಂದಿಸಿದರು.
























`
