ಉಡುಪಿ: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆ ಗ್ಲೋರಿಯಾ ಬಾರ್’ನಲ್ಲಿ ಕಳೆದ ಜೂ.15 ರಂದು ಕುಡಿದ ಮತ್ತಿನಲ್ಲಿ ಯುವಕನ ಕೊಲೆಗೆ ಯತ್ನಿಸಿದ ತಮಿಳುನಾಡು ಮೂಲದ ಅಳಗೇಶ ನನ್ನು ಪಡುಬಿದ್ರಿ ಪೊಲೀಸರು ತಮಿಳುನಾಡು ರಾಜ್ಯದ ಕೃಷ್ಣಗಿರಿ ಎಂಬಲ್ಲಿ ಬಂಧಿಸಿದ್ದಾರೆ.
ಸಾಂತೂರಿನ ಸತೀಶ್ ಆಚಾರ್ಯ ತನ್ನ ಸ್ನೇಹಿತ ನರಸಿಂಹ ಮತ್ತು ಕಾರ್ತಿಕ್ ಎಂಬವರೊಂದಿಗೆ ಕಾಂಜರಕಟ್ಟೆ ಗ್ಲೋರಿಯಾ ಬಾರ್ ನಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ಆರೋಪಿ ಅಳಗೇಶ ಎಂಬಾತ ಬಾರಿಗೆ ಬಂದು ನರಸಿಂಹನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ಮಾಡುವ ಸಂದರ್ಭದಲ್ಲಿ ಸತೀಶ್ ಆಚಾರ್ಯ ಮಧ್ಯಪ್ರವೇಶಿಸಿ ಯಾಕೆ ಗಲಾಟೆ ಮಾಡುತ್ತಿ ಎಂದು ಹೇಳಿ ಬಾರ್ ಕ್ಯಾಬಿನ್ ನಿಂದ ಹೊರಗೆ ದೂಡಿದಾಗ ನೀನು ನರಸಿಂಹನಿಗೆ ಸಪೋರ್ಟ್ ಮಾಡುತ್ತೀಯಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಅಳಗೇಶ್ ತನ್ನಲ್ಲಿದ್ದ ಚೂರಿಯಿಂದ ಸತೀಶ್ ಆಚಾರ್ಯನ ತಲೆಗೆ ಮತ್ತು ಹೊಟ್ಟೆಗೆ ತಿವಿದು ಕೊಲೆಗೆ ಯತ್ನಿಸಿ ಬಳಿಕ ತನ್ನ ಸ್ವಂತ ಊರಾದ ತಮಿಳುನಾಡಿಗೆ ಹೋಗಿ ತಲೆಮೆರೆಸಿಕೊಂಡಿದ್ದ.
ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ IPS ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ಮತ್ತು ಪರಮೇಶ್ವರ ಹೆಗಡೆ ರವರ ಮಾರ್ಗದರ್ಶನದಂತೆ ಈ ಪ್ರಕರಣದ ಬೆನ್ನುಬಿದ್ದ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾI ಹರ್ಷ ಪ್ರಿಯಾಂವದಾ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಜಯಶ್ರೀ ಮಾನೆ ರವರು ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕ ಸಕ್ತಿವೇಲು ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ಸ್ಟೇಬಲ್ ಸಂದೇಶ ಕುಮಾರ್, ಶರಣ್ ಪುತ್ರನ್ ರವರನ್ನು ಒಳಗೊಂಡ ತಂಡ ತಮಿಳುನಾಡು ರಾಜ್ಯದ ಈರೋಡ್, ಸೇಲಂ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ಆರೋಪಿ ಅಳಗೇಶನನ್ನು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ
ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
