ಬೆಂಗಳೂರು: ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಸಂಜೆ ಹೊತ್ತಲ್ಲಿ ಸೇವನೆ ಮಾಡುವ ಪಾನಿಪೂರಿಯಲ್ಲಿ 5 ರೀತಿಯ ರಾಸಾಯನಿಕ ವಸ್ತುಗಳಿವೆ. ಪಾನಿಪೂರಿ ತಯಾರಿಸಲು ಬಳಸುವ ಕೃತಕ ಬಣ್ಣದಲ್ಲಿ ಸನ್ ಸೆಟ್ ಯೆಲ್ಲೊ, ರೋಡೋಮೈನ್ ಸೇರಿದಂತೆ ಒಟ್ಟು 5 ರೀತಿಯ ರಾಸಾಯನಿಕ ವಸ್ತುಗಳು ಇರುವುದು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ರಾಜ್ಯಾದ್ಯಂತ 49 ಕಡೆ ಪಾನಿಪೂರಿ ತಯಾರಿಕೆ ಮಾಡುತ್ತಿದ್ದ ಸ್ಥಳಗಳಿಂದ ಪಾನಿಪೂರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರುವುದು ಪತ್ತೆಯಾಗಿದೆ. ಹೀಗಾಗಿ, ಶೀಘ್ರದಲ್ಲೆ ಪಾನಿಪೂರಿಗೆ ಬಳಸುವ ಕ್ಯಾನ್ಸರ್ಕಾರಕ ಅಂಶಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.
ಇನ್ನು ಶಾಲಾ ಕಾಲೇಜು ಮಕ್ಕಳು, ವಿದ್ಯಾರ್ಥಿಗಳು, ಕೆಲಸ ಮಾಡುವ ಹದಿ ಹರೆಯ ವಯಸ್ಕರು ಸೇರಿದಂತೆ ಮನೆ ಮಂದಿಗೆಲ್ಲಾ ಪಾನಿಪೂರಿ ಅಚ್ಚುಮೆಚ್ಚು. ಇನ್ನು ಕೆಲವರಿಗೆ ಸಂಜೆಯ ವೇಳೆಗೆ ಪನಿಪೂರಿಯನ್ನು ಚಪ್ಪರಿಸಿಕೊಂಡು ತಿಂದರಷ್ಟೇ ಮನಸ್ಸಿಗೆ ಆಹ್ಲಾದ. ಇದರಿಂದ ಕ್ಷಣಮಾತ್ರಕ್ಕೆ ಯಾವುದೇ ಹಾನಿ ಆಗದಿದ್ದರೂ, ನಿರಂತರವಾಗಿ ಪಾನಿಪೂರಿ ತಿನ್ನುವವರ ಆರೋಗ್ಯದ ಮೇಲೆ ಕ್ಯಾನ್ಸರ್ ಕಾರಕ ರಾಸಾಯನಿಕ ವಸ್ತುಗಳು ಆರೋಗ್ಯ ಹಾಳು ಮಾಡುತ್ತವೆ ಎಂಬುದು ಆರೋಗ್ಯ ಇಲಾಖೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರೀಕ್ಷೆಯಿಂದ ತಿಳಿದುಬಂದಿದೆ.