ಕಾರ್ಕಳ: ಗಂಡನ ಕಿರುಕುಳದಿಂದ ಬೇಸತ್ತು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರವಿ ಎಂಬವರ ತಂಗಿ ಕಮಾಲಾಕ್ಷಿ(34) ಎಂಬುವವರನ್ನು 12 ವರ್ಷದ ಹಿಂದೆ ರಾಜು ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ಅವರು ಕಳೆದ 7-8 ವರ್ಷಗಳಿಂದ ಕಾರ್ಕಳದ ಬೈಲೂರಿನಲ್ಲಿ ರಾಮಕೃಷ್ಣ ಎಂಬವರ ಬಾಡಿಗೆ ಮನೆಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.
ರಾಜು ಕಳೆದ 2-3 ವರ್ಷಗಳಿಂದ ಮದ್ಯಪಾನ ಮಾಡಿ ಹೆಂಡತಿಗೆ ಕಿರುಕುಳ ನೀಡುತ್ತಿದ್ದು, ಈ ವಿಚಾರವನ್ನು ಕಮಾಲಾಕ್ಷಿಯು ಅವಳ ತಾಯಿ ಫೋನ್ ಮಾಡಿ ತಿಳಿಸಿದ್ದರು. ಬಳಿಕ ಹಿರಿಯರು ಸೇರಿ ಸಂಧಾನ ಮಾತುಕತೆಯೂ ನಡೆದಿತ್ತು. ಬಳಿಕ 2023 ರ ಜುಲೈನಲ್ಲಿ ರಾಜು ಪತ್ನಿ ಮೇಲೆ ಹಲ್ಲೆ ನಡೆಸಿದಾಗ ಕಮಾಲಾಕ್ಷಿಯು ಮಗನೊಂದಿಗೆ ತವರಿಗೆ ಹೋಗಿ ವಾಪಾಸಾಗಿದ್ದಳು.
ಆದರೆ ಮತ್ತೆ ಜು.26 ರಂದು ಕಮಾಲಾಕ್ಷಿ ಮೇಲೆ ಹಲ್ಲೆ ನಡೆದಿರುವುದಾಗಿ ಲಕ್ಷ್ಮಿ ಎಂಬುವವರು ಫೋನ್ ಮಾಡಿ ತಿಳಿಸಿದ್ದು,ರವಿ ಅವರು ಕಮಲಾಕ್ಷಿಯನ್ನು ಕರೆದುಕೊಂಡು ಹೋಗಲು ಬಂದಾಗ ಅಜಿತ್ ಮತ್ತು ಕೀರ್ತಿ ಎಂಬುವವರು ಅವಳನ್ನು ಹೇಗೆ ಕರೆದುಕೊಂಡು ಹೋಗುತ್ತಿ ಎಂದು ರವಿಗೆ ಬೆದರಿಕೆ ಹಾಕಿದ್ದರು. ಅದೇ ಕಾರಣದಿಂದ ಮನನೊಂದ ಕಮಾಲಾಕ್ಷಿ ಮಾತ್ರೆಗಳನ್ನು ಸೇವಿಸಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಅವರು ಸ್ಪಂದಿಸದೇ ಜು.28 ರಂದು ಮೃತಪಟ್ಟಿದ್ದು, ಕಮಾಲಾಕ್ಷಿಯ ಸಾವಿಗೆ ಆಕೆಯ ಗಂಡ ರಾಜು ಈತನು ನಿಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯೇ ಕಾರಣ ಎಂದು ರವಿ ದೂರು ನೀಡಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
`